ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ: ಸಚಿವ ಶಿವಾನಂದ ಪಾಟೀಲ್

Update: 2023-12-25 13:15 GMT

ಬೆಂಗಳೂರು: ರೈತರಿಗೆ ಅವಮಾನವಾಗುವಂತಹ ಯಾವುದೇ ವಿವಾದಾತ್ಮಕ ಹೇಳಿಕೆಯನ್ನು ತಾನು ನೀಡಿಲ್ಲ. ನಾನೇನು ರೈತ ವಿರೋಧಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼ ಮೂರು ವರ್ಷಕ್ಕೊಮ್ಮೆ ರೈತರು ಬೆಳೆಯುವಂತಹ ಬೆಳೆಗಳಿಗೆ ಬೆಲೆ ಸಿಗುತ್ತದೆ. ಉಳಿದ ಎರಡು ವರ್ಷ ಅವರ ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದುದರಿಂದ, ತಮ್ಮ ಸಾಲಮನ್ನಾ ಆಗಲಿ ಎಂದು ಬಯಸುತ್ತಾರೆ ಎಂದು ಹೇಳಿದ್ದೆ. ಆದರೆ, ತಾನು ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದರು.

ನನಗೆ ಅಧಿಕಾರದ ಮದ ಏರಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ರೈತರ ಮೇಲೆ ಅಷ್ಟೊಂದು ಕರುಣೆ ಇದ್ದರೆ ರೈತರಿಗೆ ಮುಳುವಾಗಿರುವ ಕೇಂದ್ರ ಸರಕಾರದ ನೀತಿಗಳನ್ನು ಬದಲಾಯಿಸುವಂತೆ ಪ್ರಧಾನಿ ಮೋದಿಯ ಗಮನ ಸೆಳೆಯಲಿ. ಅದನ್ನು ಬಿಟ್ಟು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂತಹ ಕುತಂತ್ರ ಮಾಡಬಾರದು ಎಂದು ಶಿವಾನಂದ ಪಾಟೀಲ್ ಹೇಳಿದರು.

ಶಿವಾನಂದ ಪಾಟೀಲ್ ಹೇಳಿದ್ದೇನು?: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್, ರೈತರಿಗೆ ಕೃಷ್ಣಾ ನದಿ ನೀರು, ವಿದ್ಯುತ್ ಉಚಿತವಾಗಿ ಸಿಗುತ್ತಿದೆ.  ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊಟ್ಟರು. ಇನ್ನೂ ಅವರಿಗೆ ಇರುವ ಆಸೆ ಏನೆಂದರೆ ಮೇಲೆ ಮೇಲೆ ಬರಗಾಲ ಬಂದರೆ ನಮ್ಮ ಸಾಲ ಮನ್ನಾ ಆಗುತ್ತೆ ಅನ್ನೋದು. ಯಾರು ಈ ರೀತಿ ಬಯಸಬಾರದು ಎಂದಿದ್ದರು.

ಶಿವಾನಂದ ಪಾಟೀಲ್ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಬಿಜೆಪಿ, ಜೆಡಿಎಸ್ ಹಾಗೂ ರೈತ ಪರ ನಾಯಕರು ಶಿವಾನಂದ ಪಾಟೀಲ್ ಕ್ಷಮೆಯಾಚನೆಗೆ ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News