ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ: ಸಿದ್ದರಾಮಯ್ಯ

Update: 2024-07-26 10:13 GMT

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ದಲ್ಲಿ ತಮ್ಮ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವುದರಲ್ಲಿ ಯಾವ ಅಕ್ರಮವೂ ನಡೆದಿಲ್ಲ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ತನ್ನ ಪಾತ್ರವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಬೆಳಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂಬರ್ 464ರಲ್ಲಿ ನನ್ನ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿತ್ತು. ಅದಕ್ಕೆ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿದೆ. ಇದರಲ್ಲಿ ಅಕ್ರಮ ಏನಿದೆ' ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿಯ ಜವರ ಎಂಬವರು 26.9.1935ರಲ್ಲಿ ನಡೆದ ಸರಕಾರಿ ಹರಾಜಿನಲ್ಲಿ ಈ ಜಮೀನನ್ನು ಖರೀದಿಸಿದ್ದರು. ಅವರಿಗೆ ಮೂವರು ಮಕ್ಕಳಿದ್ದರು. ಜವರ ಮೃತಪಟ್ಟ ಬಳಿಕ ಕುಟುಂಬದ ಇತರ ಸದಸ್ಯರ ಒಪ್ಪಿಗೆ ಮೇರೆಗೆ 2004ರಲ್ಲಿ ದೇವರಾಜು ಎಂಬ ಮಗನಿಗೆ ಜಮೀನಿನ ಖಾತೆ ವರ್ಗಾವಣೆ ಆಗಿತ್ತು. ಅವರಿಂದ ನನ್ನ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ 2005ರಲ್ಲಿ ಈ ಜಮೀನು ಖರೀದಿಸಿದ್ದರು. ಇದು ಹರಾಜಿನಲ್ಲಿ ಖರೀದಿಸಿದ ಜಮೀನು ಆಗಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜಮೀನು ಖರೀದಿ ನಿಷೇಧ (ಪಿಟಿಸಿಎಲ್) ಕಾಯ್ದೆ ಅನ್ವಯ ಆಗುವುದಿಲ್ಲ ಎಂದರು.

3 ಎಕರೆ 16 ಗುಂಟೆ ಜಮೀನಿನ ಸ್ವಾಧೀನಕ್ಕೆ ಮುಡಾ 1992ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 1997ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಜಮೀನು ಮಾಲಕರ ಮನವಿಯಂತೆ ಈ ಜಮೀನನ್ನು ಡಿನೋಟಿಫೈ ಮಾಡಿ 1997ರಲ್ಲಿ ಆದೇಶ ಹೊರಡಿಸಲಾಗಿತ್ತು ಎಂದು ಮುಖ್ಯಮಂತ್ರಿ ದಾಖಲೆ ಪ್ರದರ್ಶಿಸಿದರು.

2005ರಲ್ಲಿ ಈ ಜಮೀನು ಖರೀದಿಸಿದ್ದ ಮಲ್ಲಿಕಾರ್ಜುನ ಸ್ವಾಮಿ, ಭೂ ಪರಿವರ್ತನೆಯನ್ನೂ ಮಾಡಿಸಿದ್ದರು. 2006ರಲ್ಲಿ ತಮ್ಮ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು ಎಂದರು.

'ಆ ಜಮೀನನ್ನು ಮುಡಾ ಒತ್ತುವರಿ ಮಾಡಿರುವುದು 2013ರಲ್ಲಿ ನಮ್ಮ ಕುಟುಂಬಕ್ಕೆ ಗೊತ್ತಾಯಿತು. ಬಳಿಕ ಬದಲಿ ಜಮೀನು ಕೊಡುವಂತೆ ತನ್ನ ಪಾರ್ವತಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. 2014 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬದಲಿ ನಿವೇಶನ ಕೋರಿರುವ ವಿಷಯವನ್ನು ಪತ್ನಿ ತಿಳಿಸಿದ್ದರು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದಿದ್ದೆ. ಅಲ್ಲದೆ, ಈ ಕಡತದ ಬಗ್ಗೆ ನನ್ನ ಬಳಿ ಚರ್ಚಿಸದಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೆ' ಎಂದು ಸಿದ್ದರಾಮಯ್ಯ ಹೇಳಿದರು.

'ಬದಲಿ ನಿವೇಶನ ಹಂಚಿಕೆ ಮಾಡಿರುವುದು ಬಿಜೆಪಿ ಆಡಳಿತದ ಅವಧಿಯಲ್ಲಿ. ಬಿಜೆಪಿ ಶಾಸಕರಾಗಿದ್ದ ಎಸ್.ಎ. ರಾಮದಾಸ್, ನಾಗೇಂದ್ರ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಉಪಸ್ಥಿತರಿದ್ದ ಮುಡಾ ಆಡಳಿತ ಮಂಡಳಿ ಸಭೆಯಲ್ಲಿ ನಿವೇಶನ ಹಂಚಿಕೆ ನಿರ್ಣಯ ಕೈಗೊಳ್ಳಲಾಗಿತ್ತು' ಎಂದರು.

2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಹತಾಶರಾಗಿದ್ದಾರೆ. ಆ ಕಾರಣದಿಂದ ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News