ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ: ವಿಕ್ರಂ ಸಿಂಹ ಅವರನ್ನು ವಶಕ್ಕೆ ಪಡೆದಿರುವ ಕುರಿತು ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ

Update: 2023-12-30 15:55 GMT

ಸಚಿವ ಈಶ್ವರ ಖಂಡ್ರೆ

ಬೀದರ್: ವಿಕ್ರಂ ಸಿಂಹ ಬಂಧನ ಪ್ರಕರಣ ಸಂಬಂಧ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧವಾಗಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಕ್ರಂ ಸಿಂಹ ಶುಂಠಿ ಬೆಳೆಯಲು ಪ್ರಶ್ನಿತ ಜಮೀನಿನ ಕರಾರು ಮಾಡಿಕೊಂಡಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ಪ್ರಶ್ನಿಸುವುದು ಅಗತ್ಯವೆಂದು ಮನಗಂಡು ತನಿಖಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದರು.

ಈ ಪ್ರಕರಣದಲ್ಲಿ ತಹಶೀಲ್ದಾರ್ ಪ್ರಕರಣ ಬೆಳಕಿಗೆ ತಂದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ನಿಯಮಾನುಸಾರ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪವೆಸಗಿರುವ ಆರೋಪದಡಿ 5 ಅಧಿಕಾರಿ ಸಿಬ್ಬಂದಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಪ್ರಕೃತಿ ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಆದರೆ ಬೇಲೂರು ತಾಲೂಕು ನಂದಗೋಡನ ಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಇದರಲ್ಲಿ 50ರಿಂದ60 ವರ್ಷದ ಬೃಹತ್ ಹಳೆಯ ಮರಗಳೂ ಇವೆ. ಈ ರೀತಿ ಸ್ವಾರ್ಥಕ್ಕಾಗಿ ಯಾರೇ ಮರ ಕಡಿದರೂ ಅದು ಅಪರಾಧ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ.ಅಲ್ಲದೆ, ವೃಕ್ಷ ಸಂರಕ್ಷಣಾ ಕಾಯಿದೆಯಡಿ ಸರಕಾರಿ ಜಾಗದಲ್ಲಿಯೇ ಆಗಲೀ, ಪಟ್ಟಾ ಜಮೀನಿನಲ್ಲೇ ಆಗಲಿ ಅನುಮತಿ ಪಡೆಯದೆ ಅಕ್ರಮವಾಗಿ ಮರ ಕಡಿಯುವುದು ಅಪರಾಧ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News