ನೋಟಿಸ್‍ಗೆಲ್ಲ ಹೆದರುವ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ರೇಣುಕಾಚಾರ್ಯ

Update: 2023-07-01 18:10 GMT

ಬೆಂಗಳೂರು, ಜು. 1: ‘ಪಕ್ಷದಿಂದ ನನಗೆ ನೀಡಿರುವ ನೋಟಿಸ್‍ಗೆ ಹೆದರಿ ಬಿಡುತ್ತೇನೆಂದು ಭಾವಿಸಿದ್ದರೆ ತಪ್ಪು. ಇಂತಹ ನೋಟಿಸ್‍ಗೆಲ್ಲ ನಾನು ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, 11 ಮಂದಿಗೆ ನೋಟಿಸ್ ನೀಡಿದ್ದೇವೆಂದು ಹೇಳಿದ್ದಾರೆ. ಆದರೆ, ಉಳಿದ 10 ಮಂದಿ ಯಾರು?’ ಎಂದು ಮಾಜಿ ಸಚಿವ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.

ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಎಸ್‍ವೈ ಅವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದರು. ಅವರ ಪಾದಯಾತ್ರೆ ಪ್ರತಿಫಲವಾಗಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅವರು ಬಿಜೆಪಿಯ ಅಗ್ರಮಾನ್ಯ ನಾಯಕ’ ಎಂದು ನುಡಿದರು.

‘ಕಾಂಗ್ರೆಸ್-ಜೆಡಿಎಸ್ ಶಾಸಕರು ಯಡಿಯೂರಪ್ಪ, ಮೋದಿ ಅವರನ್ನು ನೋಡಿ ಪಕ್ಷಕ್ಕೆ ಬಂದರು. ಅವರನ್ನು ಉಪ ಚುನಾವಣೆಗಳಲ್ಲಿ ಗೆಲ್ಲಿಸಿದರು. ಅಂತಹ ನಾಯಕರ ವಿರುದ್ಧ ಮಾತಾಡಿದರೆ ಪಕ್ಷ ಅವರಿಗೆ ನೋಟಿಸ್ ನೀಡಿಲ್ಲ. ಅವರಿಗೆ ರಾಜ ಮಾರ್ಯಾದೆ. ಆದರೂ, ಬಿಎಸ್‍ವೈ ಗೌರವದಿಂದ ರಾಜೀನಾಮೆ ನೀಡಿದರು. ಇನ್ನು ಮೈಸೂರು ಸಂಸದರದ್ದು ಹೊಂದಾಣಿಕೆ ರಾಜಕಾರಣ ಆಗಿದೆ. ಒಬ್ಬ ಮಹಾನ್ ನಾಯಕನಿಗೆ ಅಪಮಾನ ಮಾಡುವುದು ಸರಿಯಲ್ಲ’ ಎಂದು ರೇಣುಕಾಚಾರ್ಯ ಆಕ್ಷೇಪಿಸಿದರು.

ನಡ್ಡಾ ಭೇಟಿ ಮಾಡುವೆ: ‘ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತೇವೆ. ಜೆ.ಪಿ.ನಡ್ಡಾರನ್ನು ಭೇಟಿ ಮಾಡುತ್ತೇವೆ. ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಏನು ಎಂದು ಹೇಳುತ್ತೇನೆ. ನಮ್ಮ ಸರಕಾರ ತಪ್ಪು ನಿರ್ಧಾರಗಳ ಬಗ್ಗೆ ಸಲಹೆ ಕೊಡುತ್ತೇನೆ. ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಅವರು ತಿಳಿಸಿದರು.

‘ನಾನು ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆಂದು ಎಲ್ಲಿ ಸೃಷ್ಟಿ ಮಾಡಿದರೂ ಗೊತ್ತಿಲ್ಲ. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ನನ್ನನ್ನು ಬಲಿಪಶು ಮಾಡಲು ಸಾಧ್ಯವಿಲ್ಲ. ಇನ್ನೂ ಟಾರ್ಗೆಟ್ ಮಾಡಲು ಆಗುವುದಿಲ್ಲ. ನನ್ನ ಮೇಲೆ ಮೋದಿ, ಬಿಎಸ್‍ವೈ, ನನ್ನ ಕ್ಷೇತ್ರದ ಜನರ ಆಶೀರ್ವಾದ ಇದೆ’

-ರೇಣುಕಾಚಾರ್ಯ ಮಾಜಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News