ಬಿಎಸ್‌ವೈ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯಿಲ್ಲ: ಸಚಿವ ಎಂ.ಬಿ.ಪಾಟೀಲ್

Update: 2024-06-14 13:56 GMT

ಬೆಂಗಳೂರು : ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಅವರ ವಿರುದ್ಧ ರಾಜಕೀಯ ದ್ವೇಷದ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಕುರಿತಂತೆ ಸರಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ರಾಜ್ಯದಲ್ಲಿ ಚಿತ್ರದುರ್ಗದ ಮುರಘಾಮಠದ ಸ್ವಾಮಿಗಳ ಪ್ರಕರಣವನ್ನು ನೋಡಿದ್ದೀರಿ. ಆಗಲೂ ಪೋಕ್ಸೋ ಕಾಯ್ದೆಯಡಿ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.

ಇನ್ನೂ, ಈ ಪ್ರಕರಣದಲ್ಲಿ ಹೈಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಕೋರ್ಟ್‍ನ ನಿರ್ದೇಶನ ಇರಬೇಕಾದರೆ ಕಾಂಗ್ರೆಸ್ ಬಿಜೆಪಿಯ ಪ್ರಶ್ನೆ ಬರಲ್ಲ. ತಪ್ಪಿತಸ್ಥರು ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಸಂತ್ರಸ್ತೆಯೇ ನ್ಯಾಯಾಧೀಶರ ಎದುರು ಹೇಳಿಕೆ ಕೊಟ್ಟಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದರು.

ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರವನ್ನು ಪಕ್ಷದ ಆಂತರಿಕ ವಲಯದಲ್ಲಿ ಚರ್ಚಿಸುತ್ತೇವೆ. ಬಹಿರಂಗವಾಗಿ ಚರ್ಚೆಸುವುದಕ್ಕೆ ಆಗಲ್ಲ. ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ನಮ್ಮ ವಿಚಾರ ತಿಳಿಸಿದ್ದೇವೆ. ಮುಂದೆಯೂ ಅಗತ್ಯವಿದ್ದಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದ ಅವರು, ಬಿಜೆಪಿ ನಾಯಕರು ಮೊದಲು ಅವರು ಮಹಾರಾಷ್ಟ್ರದಲ್ಲಿ ತಮ್ಮ ಸರಕಾರವನ್ನು ಉಳಿಸಿಕೊಳ್ಳೋಕೆ ಹೇಳಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News