ʼಕರ್ನಾಟಕ ಬಂದ್‌ʼಗೆ ಬೆಂಬಲವಿಲ್ಲ: ನೈಜ ಹೋರಾಟಗಾರರ ವೇದಿಕೆ

Update: 2023-09-28 12:04 GMT

ಬೆಂಗಳೂರು, ಸೆ.28: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಗೆ, ಹೋರಾಟಕ್ಕೆ ಮಾತ್ರ ನಮ್ಮ ಬೆಂಬಲವಿದೆ. ಆದರೆ, ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ ಎಂದು ʼನೈಜ ಹೋರಾಟಗಾರರ ವೇದಿಕೆʼ ತಿಳಿಸಿದೆ.

ಈ ಸಂಬಂಧ ವೇದಿಕೆ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಡಿ ನಮ್ಮ ಆಡಳಿತ ನಡೆಯುತ್ತಿದೆ. ಪ್ರಜೆಗಳಿಗೆ ಯಾವುದೆ ಸಂದರ್ಭದಲ್ಲಿ ಅನ್ಯಾಯವಾದಾಗ ಹೋರಾಟ, ಪ್ರತಿಭಟನೆ ಮೂಲಕ ನ್ಯಾಯವನ್ನು ದೊರಕಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ವಿರುದ್ಧ ಶಾಸಕಾಂಗ, ಕಾರ್ಯಾಂಗದ ಕಾರ್ಯವೈಖರಿಗೆ ಬೀದಿಗೆ ಇಳಿದು ಹೋರಾಟ, ಪ್ರತಿಭಟನೆಗಳ ಮೂಲಕ ಸರಕಾರವನ್ನು ಎಚ್ಚರಿಸಿ ನ್ಯಾಯ ಪಡೆಯಬೇಕೆ ಹೊರತು ಸಂಪೂರ್ಣವಾಗಿ ಕರ್ನಾಟಕ ಬಂದ್ ಮಾಡುವ ಮೂಲಕ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದರಿಂದ ಸಾರ್ವಜನಿಕರಿಗೆ, ಕೂಲಿ ಕಾರ್ಮಿಕರಿಗೆ ದಿನನಿತ್ಯವೂ ದುಡಿದು ತಿನ್ನುವ ಕೈಗಳಿಗೆ ತೊಂದರೆ ಉಂಟಾಗುತ್ತದೆ. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ನೈಜ್ಯ ಹೋರಾಟಗಾರರ ವೇದಿಕೆಯು ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ಶಾಸಕಾಂಗದ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆ ಮತ್ತು ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಆದರೆ ಕರ್ನಾಟಕ ಬಂದ್‌ಗೆ ಬೆಂಬಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News