ಟೆಕೆಟ್ ನೀಡದಿದ್ದರೆ ಪಕ್ಷೇತರ ಸ್ಪರ್ಧೆ ಖಚಿತ: ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್

Update: 2024-08-12 15:59 GMT

ಬೆಳಗಾವಿ: ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಪ್ರಬಲ ಆಕಾಂಕ್ಷಿ ಆಗಿದ್ದು, ಬಿಜೆಪಿ ವತಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪರ್ಧಿಸುವಂತೆ ಜನರೂ ಕೂಡ ಒತ್ತಡ ಹಾಕುತ್ತಿದ್ದಾರೆ. ನಾವೆಲ್ಲರೂ ಸಮಾನಮನಸ್ಕರ ಸಭೆ ಸೇರಿ ಈಗಾಗಲೇ ನಿರ್ಣಯ ಮಾಡಿದ್ದೇವೆ. ಅದೇ ರೀತಿ, ಒಂದು ವೇಳೆ ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಬಿಜೆಪಿ ವತಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಪಕ್ಷೇತರನಾಗಿ ಮತ್ತೆ ಗೆದ್ದು ಎನ್‍ಡಿಎ ಭಾಗವಾಗುವೆ. ಈ ವಿಚಾರವಾಗಿ ಏನೇನು ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದರು.

ನನ್ನ ತಾಲೂಕಿನ ಜನ ನಾನು ಯಾವುದೇ ಚಿಹ್ನೆಯಡಿ ನಿಂತರೂ ಗೆಲ್ಲಿಸುತ್ತಾರೆ. ಯಾವುದೇ ಕಾರಣಕ್ಕೂ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬಾರದು. ಆ ಕ್ಷೇತ್ರವನ್ನು ಎನ್‍ಡಿಎ ವಶಕ್ಕೆ ತೆಗೆದುಕೊಳ್ಳಬೇಕು ಎಂದು ನಿರ್ಣಯಿಸಿದ್ದೇವೆ. ಹಾಗಾಗಿ, ನಾನು ಎನ್‍ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನಸ್ಸು ಮಾಡಿದ್ದೇನೆ ಎಂದು ಹೇಳಿದರು.

ನಾನು ಕಾಂಗ್ರೆಸ್‍ಗೆ ಹೋಗುವ ಬಗ್ಗೆ ಆಲೋಚಿಸಿಲ್ಲ. ಯಾರೂ ನನ್ನನ್ನು ಮಾತನಾಡಿಸಲಿಲ್ಲ. ಡಿ.ಕೆ.ಶಿವಕುಮಾರ್ ಏನೇನೋ ಮಾತನಾಡುತ್ತಾರೆ. ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕೆಂದು ಗೊತ್ತಿದೆ ಎಂದು ಅವರು ತಿಳಿಸಿದರು.

ಈಗಾಗಲೇ ನಮ್ಮ ರಾಜ್ಯ ನಾಯಕರು ನನ್ನ ಸ್ಪರ್ಧೆಯ ಬಗ್ಗೆ ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸ್ವಲ್ಪ ಮುಂಗೋಪ ಅಷ್ಟೇ ಆದರೆ ಅಂತಿಮವಾಗಿ ಅವರ ಜೊತೆ ವರಿಷ್ಠರು ಮಾತಾಡಿದ ಬಳಿಕ ನನ್ನ ಸ್ಪರ್ಧೆಗೆ ಅವರೂ ಒಪ್ಪಿಗೆ ಸೂಚಿಸುವ ಭರವಸೆ ಇದೆ ಎಂದೂ ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News