ಆಹಾರ ಗುಣಮಟ್ಟ ಕಾಪಾಡಿಕೊಳ್ಳದ ರಾಜ್ಯದ 127 ಪಿಜಿಗಳಿಗೆ ನೋಟಿಸ್ ಜಾರಿ
Update: 2024-11-20 15:48 GMT
ಬೆಂಗಳೂರು: ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳದ ಹಿನ್ನೆಲೆಯಲ್ಲಿ ರಾಜ್ಯದ 127 ಪಿಜಿಗಳಿಗೆ(ಪೇಯಿಂಗ್ ಗೆಸ್ಟ್) ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ನೋಟಿಸ್ ನೀಡಿದೆ.
ರಾಜ್ಯದ 305 ಪಿಜಿಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ ಇಲಾಖೆಯ ಅಧಿಕಾರಿಗಳು, 127 ಪಿಜಿಗಳಲ್ಲಿ ಅನುಮಾನಗೊಂಡು ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದರು.
ಸಂಗ್ರಹಿಸಿದ್ದ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದ ವೇಳೆ ಸುರಕ್ಷತೆ ಕಾಪಾಡದೇ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 127 ಪಿಜಿಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ನಾಲ್ಕು ಪಿಜಿಗಳಿಗೆ ಸೇರಿ ಒಟ್ಟು 21 ಸಾವಿರ ರೂ. ದಂಡ ಹಾಕಲಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಸಂಬಂಧ ಪಿಜಿಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸೂಚನೆ ನೀಡಿದ್ದು, ಒಂದು ವೇಳೆ ಗುಣಮಟ್ಟ ತಪ್ಪಿದರೆ ಅಂತಹ ಪಿಜಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.