ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಧಿಕಾರಿ ಜೆ.ಉಮೇಶ್ ಅಮಾನತು

Update: 2023-08-25 15:17 GMT

ಚಿಕ್ಕಮಗಳೂರು, ಆ.25: ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಇರುವ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಜೆ.ಉಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶಿಸಿದ್ದಾರೆ.

ಇತ್ತೀಚೆಗೆ ವರ್ಗಾವಣೆಗೊಂಡು ಕಾರವಾರ ಸೀಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿದ್ದ ಜೆ.ಉಮೇಶ್ ಅವರ ಮೇಲೆ ಅಕ್ರಮ ಭೂ ಮಂಜೂರಾತಿ ಪ್ರಕರಣ ಸಂಬಂಧ ತರೀಕೆರೆ ಉಪವಿಭಾಗಾಧಿಕಾರಿ ಡಾ|ಕಾಂತರಾಜ್ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ತಹಶೀಲ್ದಾರ್ ಜೆ.ಉಮೇಶ್ ಬಂಧನ ಭೀತಿಯಿಂದ ಕಣ್ಮರೆಯಾಗಿದ್ದರು. ಕಡೂರು ಪೊಲೀಸರು ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಜೆ.ಉಮೇಶ್ ಅವರನ್ನು ಬಂಧಿಸಿದ್ದಾರೆ. ಕಡೂರು ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಉಳ್ಳಿನಾಗರು ಸರಕಾರಿ ಬೀಳು ಸರ್ವೇ ನಂ.43ರಲ್ಲಿನ 5.04 ಎಕರೆ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಆರೋಪ ಈತನ ಮೇಲಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸರಕಾರಿ ಅಧಿಕಾರಿಯ ಗಂಭೀರ ಕರ್ತವ್ಯಲೋಪ ಮತ್ತು ಸರಕಾರಕ್ಕೆ ತೀವ್ರ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಯ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇದ್ದು, ಈ ಕಾರಣದಿಂದ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News