ಸುಧೀರ್ ಚೌಧರಿ ವಿರುದ್ಧ ತನಿಖೆ ನಡೆಸಲು ಸೂಕ್ತ ಕಾರಣಗಳಿವೆ ಎಂದ ಹೈಕೋರ್ಟ್
ರಾಜ್ಯ ಸರ್ಕಾರದ ವಾಹನ ಖರೀದಿ ಸಬ್ಸಿಡಿ ಯೋಜನೆಯೊಂದರ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ರಾಜ್ಯದ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಎದುರಿಸುತ್ತಿರುವ ಆಜ್ ತಕ್ ಟಿವಿ ವಾಹಿನಿಯ ಕನ್ಸಲ್ಟಿಂಗ್ ಸಂಪಾದಕ ಸುಧೀರ್ ಚೌಧರಿ ಅವರ ವಿರುದ್ಧ ತನಿಖೆ ನಡೆಸುವ ಅಗತ್ಯತೆ ಹೊರನೋಟಕ್ಕೆ ಗೋಚರಿಸುತ್ತದೆ ಎಂದು ಹೈಕೋರ್ಟ್ ಇಂದು ಮೌಖಿಕವಾಗಿ ಹೇಳಿದೆ.
ಬೆಂಗಳೂರು: ರಾಜ್ಯ ಸರ್ಕಾರದ ವಾಹನ ಖರೀದಿ ಸಬ್ಸಿಡಿ ಯೋಜನೆಯೊಂದರ ಕುರಿತು ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ರಾಜ್ಯದ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಎದುರಿಸುತ್ತಿರುವ ಆಜ್ ತಕ್ ಟಿವಿ ವಾಹಿನಿಯ ಕನ್ಸಲ್ಟಿಂಗ್ ಸಂಪಾದಕ ಸುಧೀರ್ ಚೌಧರಿ ಅವರ ವಿರುದ್ಧ ತನಿಖೆ ನಡೆಸುವ ಅಗತ್ಯತೆ ಹೊರನೋಟಕ್ಕೆ ಗೋಚರಿಸುತ್ತದೆ ಎಂದು ಹೈಕೋರ್ಟ್ ಇಂದು ಮೌಖಿಕವಾಗಿ ಹೇಳಿದೆ.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆ ಹಿಂದೂಗಳಿಗಲ್ಲ ಎಂದು ಹೇಳಿ ಶೋ ಒಂದನ್ನು ಸುಧೀರ್ ಚೌಧರಿ ಇತ್ತೀಚೆಗೆ ನಡೆಸಿದ್ದು ಅದರಲ್ಲಿ ಅವರು ಸುಳ್ಳು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿ ಶಿವಕುಮಾರ್ ಎಸ್ ಅವರು ದೂರು ದಾಖಲಿಸಿದ್ದರು.
ಚೌಧರಿ ವಿರುದ್ಧ ಐಪಿಸಿ ಸೆಕ್ಷನ್ 505 ಮತ್ತು 153ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸುದ್ದಿ ವಾಹಿನಿ ತನ್ನ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿ ನೀಡಿದೆ ಎಂದು ರಾಜ್ಯ ಸರ್ಕಾರ ಹೇಳಿರುವ ಹೊರತಾಗಿಯೂ ಅದು ತನ್ನ ಹೇಳಿಕೆಗಳನ್ನು ವಾಪಸ್ ಪಡೆದಿಲ್ಲ ಎಂದು ಶುಕ್ರವಾರದ ವಿಚಾರಣೆ ವೇಳೆ ಜಸ್ಟಿಸ್ ಹೇಮಂತ್ ಚಂದನ್‌ಗೌಡರ್ ಹೇಳಿದರು.
“ಮಾಹಿತಿ ಒದಗಿಸುವುದು ಮಾಧ್ಯಮದ ಜವಾಬ್ದಾರಿ ಆದರೆ ಇದು ನೀಡಬೇಕಾದ ಮಾಹಿತಿಯಲ್ಲ. ಪ್ರಯೋಜನಗಳನ್ನು ಅಲ್ಪಸಂಖ್ಯಾತರಿಗೆ ಮಾತ್ರವೇ ನೀಡಲಾಗುತ್ತದೆ ಎಂದೇನಿಲ್ಲ, ಕಾರ್ಪೊರೇಟ್ ಸಂಸ್ಥೆಗಳಿಗೂ ನೀಡಲಾಗುತ್ತದೆ,” ಎಂದು ನ್ಯಾಯಾಧೀಶರು ಹೇಳಿದರು.
ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು ಇಂತಹುದೇ ಯೋಜನೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಇತ್ತು. ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರ ಯೋಜನೆ ಒದಗಿಸುತ್ತಿದೆ ಹಿಂದೂಗಳನ್ನು ವಂಚಿತರನ್ನಾಗಿಸುತ್ತದೆ ಎಂಬ ಆರೋಪವನ್ನು ಚಾನೆಲ್ ಹೊರಿಸಿದೆ.
ಈ ಪ್ರಕರಣದಲ್ಲಿ ತನಿಖೆ ನಡೆಸಲು ಸೂಕ್ತ ಕಾರಣಗಳಿವೆ ಎಂದು ನ್ಯಾಯಾಲಯ ಹೇಳಿದೆ.
ಕರ್ನಾಟಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ಮಾತನಾಡಿ ಈ ಯೋಜನೆಯಡಿ ಈ ಹಿಂದೆ ರೂ 2.5 ಲಕ್ಷ ಸಬ್ಸಿಡಿ ಇದ್ದರೆ ಈಗ ರೂ 3 ಲಕ್ಷಕ್ಕೆ ಏರಿಸಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 11ರಂದು ಚೌಧುರಿ ಪ್ರಸ್ತುತ ಪಡಿಸಿದ ಕಾರ್ಯಕ್ರಮವೊಂದು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಾಹೀರಾತೊಂದರತ್ತ ಬೆಳಕು ಚೆಲ್ಲಿತ್ತು. ವಾಣಿಜ್ಯ ವಾಹನಗಳ ಖರೀದಿಗಾಗಿ ವಾರ್ಷಿಕ ರೂ. 4.5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ ಧಾರ್ಮಿಕ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಜನರಿಗೆ ರೂ 3 ಲಕ್ಷದ ತನಕ ಶೇ50 ಸಬ್ಸಿಡಿ ನೀಡುವ ಯೋಜನೆಯ ಕುರಿತ ಜಾಹೀರಾತು ಅದಾಗಿತ್ತು.
ಆದರೆ ಈ ಯೋಜನೆ ತಾರತಮ್ಯಕಾರಿ ಮತ್ತು ಈ ಯೋಜನೆ ಹಿಂದುಗಳಿಗೆ ಲಭ್ಯವಿಲ್ಲ ಎಂದು ಸುಧೀರ್ ಚೌಧರಿ ಅವರು ತಮ್ಮ ಶೋದಲ್ಲಿ ಹೇಳಿಕೊಂಡಿದ್ದರು.
ಆದರೆ ಇದೇ ಪ್ರಯೋಜನವನ್ನು ಪರಿಶಿಷ್ಟ ಜಾತಿ ಪಂಗಡಗಳ ಸದಸ್ಯರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಐರಾವತ ಯೋಜನೆಯಡಿ ಪಡೆಯಬಹುದು ಮತ್ತು ಹಿಂದುಳಿದ ವರ್ಗಗಳು ರಾಜ್ಯ ಸರ್ಕಾರದಿಂದ ಪಡೆಯಬಹುದು ಎಂಬುದನ್ನು ಈ ಶೋ ಹೇಳಿಲ್ಲ.
ಈ ಮೂರೂ ಯೋಜನೆಗಳು ಜುಲೈ 2023ರ ಕರ್ನಾಟಕ ಬಜೆಟಿನಲ್ಲಿ ಉಲ್ಲೇಖಿಸಲಾಗಿತ್ತು. ಸ್ವಾವಲಂಬಿ ಸಾರಥಿ ಎಂಬ ವಾಹನ ಸಬ್ಸಿಡಿ ಯೋಜನೆಯಡಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ವರ್ಗದವರು ಮತ್ತು ಹಿಂದುಳಿದ ವರ್ಗಗಳವರು ಪ್ರಯೋಜನ ಪಡೆಯಬಹುದು ಎಂದು ಬಜೆಟ್ ಹೇಳಿತ್ತು.
“ಈ ಯೋಜನೆ ಹಿಂದೂಗಳಿಗಲ್ಲ” ಎಂದು ಹೇಳುವ ಮೂಲಕ ಚೌಧರಿ ಅವರು ಯೋಜನೆಗೆ ಮತೀಯ ಬಣ್ಣ ನೀಡಲು ಚೌಧರಿ ಯತ್ನಿಸಿದ್ದರು.
“ನೀವು ತುಂಬಾ ಬಡವರಾಗಿದ್ದರೆ, ನಿಮ್ಮಲ್ಲಿ ಹಣವಿಲ್ಲದೇ ಇದ್ದರೆ, ಆದರೆ ನೀವು ಹಿಂದು ಆಗಿದ್ದರೆ, ವಾಹನ ಖರೀದಿಸಲು ನಿಮಗೆ ಸಬ್ಸಿಡಿ ದೊರೆಯುವುದಿಲ್ಲ ಎಂದು ಹೇಳುವ ಪ್ರಯತ್ನ ಕರ್ನಾಟಕ ಸರ್ಕಾರ ಮಾಡುತ್ತಿದೆ. ಆದರೆ ಮುಸ್ಲಿಮರು, ಸಿಖರು, ಬೌದ್ಧರು ವಾಹನ ಖರೀದಿಗೆ ಸಬ್ಸಿಡಿ ಪಡೆಯಬಹುದು,” ಎಂದು ಚೌಧರಿ ತಮ್ಮ ಶೋದಲ್ಲಿ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆಳೆಯುವ ಹೇಳಿಕೆ ನೀಡಿದ್ದಕ್ಕೆ” ಚೌಧರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದರು.