ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ; ಝೀರೋ ಟ್ರಾಫಿಕ್ ಮೂಲಕ ರವಾನೆ
ಚಿಕ್ಕಮಗಳೂರು, ಆ.7: ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಮೆದುಳು ನಿಷ್ಕ್ರೀಯಗೊಂಡು ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆಯೊಬ್ಬರ ಬಹು ಅಂಗಾಂಗಗಳ ದಾನಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಬಹು ಅಂಗಾಂಗಳ ಮರುಜೋಡಣೆಗಾಗಿ ರವಾನಿಸುವ ಮೂಲಕ 2ನೇ ಬಾರಿಗೆ ಜಿಲ್ಲಾಸ್ಪತ್ರೆ ಸಾಧನೆ ಮಾಡಿದೆ.
ಚಿಕ್ಕಮಗಳೂರು ನಗರದ ಖ್ಯಾತ ಸಮಾಜ ಸೇವಕ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮತ್ತು ನಗರಸಭೆ ಮಾಜಿ ಸದಸ್ಯ ರೂಬೆನ್ ಮೋಸೆಸ್ ಅವರ ಪತ್ನಿ ಸಹನಾ ಜೋನ್ಸ್ ಅವರು ಕಳೆದ ಶುಕ್ರವಾರ ತಮ್ಮ ಮನೆಯಲ್ಲಿದ್ದ ವೇಳೆ ತೀವ್ರ ತಲೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ನಗರದ ಸ್ಪಂದನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಸಹನಾ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ವೈದ್ಯರು ಬ್ರೈನ್ ಟ್ಯೂಮರ್ ಇರುವುದನ್ನು ಪತ್ತೆ ಮಾಡಿದ್ದರು. ಅಲ್ಲದೇ ಸಹನಾ ಅವರು ಕೋಮಾ ಸ್ಥಿತಿಗೆ ಹೋಗಿರುವುದನ್ನು ಖಚಿತ ಪಡಿಸಿದ್ದರು. ನಂತರ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕಾನ್ ಮಾಡಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತಜ್ಞ ವೈದ್ಯರು ಸಹನಾ ಅವರ ಮೆದುಳು ನಿಷ್ಕ್ರೀಯಗೊಂಡಿರುವುದನ್ನು ದೃಢಪಡಿಸಿದ್ದರು.
ಮೆದುಳು ನಿಷ್ಕ್ರೀಯಗೊಂಡ ಹಿನ್ನೆಲೆಯಲ್ಲಿ ಸಹನಾ ರೂಬೆನ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಕಳೆದ 2 ದಿನಗಳಿಂದ ಐಸಿಯುನಲ್ಲಿ ದಾಖಲು ಮಾಡಲಾಗಿತ್ತು. ಸಹನಾ ಅವರ ಮೆದುಳು ಹೊರತು ಪಡಿಸಿ ಉಳಿದ ಅಂಗಾಂಗಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಸಹನಾ ಪತಿ ರೂಬೆನ್ ಅವರು ಪತ್ನಿಯ ಬಯಕೆಯಂತೆ ಬಹು ಅಂಗಾಂಗಳ ದಾನಕ್ಕೆ ನಿರ್ಧರಿಸಿದ್ದರು. ಇದನ್ನು ತಮ್ಮ ಕುಟುಂಬಸ್ಥರೊಂದಿಗೆ ಚರ್ಚಿಸಿದ ಅವರು ಕುಟುಂಬಸ್ಥರ ಒಪ್ಪಿಗೆ ಬಳಿಕ ಬಹುಅಂಗಾಂಗಗಳ ದಾನಕ್ಕೆ ಸಮ್ಮತಿ ನೀಡಿದ್ದರು.
ಮೆದುಳು ನಿಷ್ಕ್ರೀಯಗೊಂಡಿದ್ದ ಸಹನಾ ಅವರ ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಮೋಹನ್‍ಕುಮಾರ್ ಜೀವನ ಸಾರ್ಥಕತೆ ಸಂಸ್ಥೆಯೊಂದಿಗೆ ಚರ್ಚಿಸಿ ಶನಿವಾರ ಹಾಗೂ ರವಿವಾರ ಬಹು ಅಂಗಾಗಗಳನ್ನು ಬೇರ್ಪಡಿಸುವುದು ಹಾಗೂ ಅಂಗಾಂಗಗಳ ರವಾನೆಗೆ ಮರುಜೋಡಣೆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಸಹನಾ ಅವರ ಹೃದಯದ ರಕ್ತದ ಮಾದರಿ ಹೊಂದಿಕೆಯಾಗದ ಕಾರಣಕ್ಕೆ ಹೃದಯ ಹೊರತು ಪಡಿಸಿ ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ಐದು ಅಂಗಾಂಗಳ ದಾನಕ್ಕೆ ವೈದ್ಯರು ಸಿದ್ಧತೆ ಕೈಗೊಂಡಿದ್ದರು.
ಸೋಮವಾರ ಮಧ್ಯಾಹ್ನ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ನೇತೃತ್ವದಲ್ಲಿ 2 ತಜ್ಞ ವೈದ್ಯರ ತಂಡ ಸಹನಾ ರೂಬೆನ್ ಅವರ ಅಂಗಾಂಗ ದಾನದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕಣ್ಣು, ಕಿಡ್ನಿ, ಲಿವರ್ ಸೇರಿದಂತೆ ದೇಹದ ಐದು ಅಂಗಾಂಗಗಳನ್ನು ಬೇರ್ಪಡಿಸಿದ್ದು, ಮರುಜೋಡಣೆಗಾಗಿ ಅಂಗಾಂಗಗಳನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಅಪೊಲೊ ಆಸ್ಪತ್ರೆ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನಿಸಲಾಯಿತು.
ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ ಹಾಗೂ ಅಂಗಾಂಗಗಳ ರವಾನೆ ಹಿನ್ನೆಲೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಎಸ್ಪಿ ಉಮಾ ಪ್ರಶಾಂತ್ ಅವರು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ್ದರು. ಅಲ್ಲದೇ ಜೀರೊ ಟ್ರಾಫಿಕ್ ಮೂಲಕ ಅಂಗಾಂಗಗಳ ರವಾನೆಗೆ ಕ್ರಮವಹಿಸಿದ್ದರು. ಅದರಂತೆ ಸೋಮವಾರ ಸಂಜೆ4ಕ್ಕೆ ಮೂರು ಆಂಬುಲೆನ್ಸ್‍ಗಳು ಜೀರೋ ಟ್ರಾಫಿಕ್‍ನಲ್ಲಿ ಸಹನಾ ಅವರ ಅಂಗಾಂಗಗಳನ್ನು ಮಂಗಳೂರಿನ ಎಜೆ ಆಸ್ಪತ್ರೆ ಹಾಗೂ ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ರವಾನಿಸಲಾಗಿದೆ.
2ನೇ ಬಾರಿಗೆ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿ ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ:
ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಕಡೂರು ಮೂಲದ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ ಬಾಯಿ ಸಾರಿಗೆ ಬಸ್‍ನಿಂದ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ತಲೆಗೆ ಪೆಟ್ಟು ಬಿದ್ದಿದ್ದರಿಂದ ಮೆದುಳು ನಿಷ್ಕ್ರೀಯಗೊಂಡಿತ್ತು. ಈ ವೇಳೆ ಆಕೆಯ ಪೋಷಕರ ಸಮ್ಮತಿ ಮೇರೆಗೆ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಡಾ.ಮೋಹನ್‍ಕುಮಾರ್ ಅವರ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ರಕ್ಷಿತಾ ಬಾಯಿ ಅವರ ಹೃದಯ ಸೇರಿದಂತೆ ಕಿಡ್ನಿ, ಲಿವರ್, ಕಣ್ಣು, ಲಂಗ್ಸ್‍ಗಳನ್ನು ಬೇರ್ಪಡಿಸಿ ಅಂಗಾಂಗ ದಾನ ಮಾಡುವ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಈ ಮೂಲಕ ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಯಾಗಿರುವ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ ನಡೆಸಿದ ಮೊದಲ ಜಿಲ್ಲಾಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಿತ್ತು. ಈ ಕಾರಣಕ್ಕೆ ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನೂ ಪಡೆದುಕೊಂಡಿತ್ತು.