2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಸಾವನ್ನು ವಕ್ಫ್ ವಿವಾದಕ್ಕೆ ಎಳೆದು ತಂದ ಮಾಧ್ಯಮಗಳು!
ಹಾವೇರಿ: ವಕ್ಫ್ ಬೋರ್ಡ್ ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿವಿಧ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು, ಈ ಸುದ್ದಿಯು ಸತ್ಯಕ್ಕೆ ದೂರವಾದ್ದು ಎಂದು ಹಾವೇರಿ ಎಸ್‌ಪಿ ಪ್ರಕಟನೆ ಮೂಲಕ ಸ್ವಷ್ಟನೆ ನೀಡಿದ್ದಾರೆ.
ವಕ್ಫ್ ಕಾರಣ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಪಬ್ಲಿಕ್ ಟಿವಿ, ಕನ್ನಡದುನಿಯಾ ಸುದ್ದಿ ಮಾಧ್ಯಮಗಳು ಹಂಚಿಕೊಂಡಿವೆ. ಈ ಸುದ್ದಿಯನ್ನು ಪರಿಶೀಲಿಸದೆ ಪ್ರಕಟಿಸಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸುಳ್ಳು ಸುದ್ದಿಯನ್ನು ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಕೂಡ ಹಂಚಿಕೊಂಡಿದ್ದಾರೆ.
ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ ಕಾರಣದಿಂದಾಗಿ ಹಾವೇರಿಯ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಎಂಬುದು ಸುಳ್ಳು ಸುದ್ದಿ ಎಂದು ಹಾವೇರಿ ಪೊಲೀಸರು ಎಕ್ಸ್ ಖಾತೆಯಲ್ಲಿ ಫ್ಯಾಕ್ಟ್ ಚೆಕ್ ಜೊತೆ ಸ್ಪಷ್ಟನೆ ನೀಡಿದ್ದಾರೆ. ಆ ಬಳಿಕ ತೇಜಸ್ವಿ ಸೂರ್ಯ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು ಫ್ಯಾಕ್ಟ್ ಚೆಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸ್ಪಷ್ಟನೆಯಲ್ಲಿ “07.11.2024 ರಂದು ಕನ್ನಡ ನ್ಯೂಸ್ ನೌ ಎಂಬ ಹೆಸರಿನ ಡಿಜಿಟಲ್ ನ್ಯೂಸ್ ನಲ್ಲಿ ಹಾವೇರಿ ಜಿಲ್ಲೆಯ ಹರಣಗಿ ಗ್ರಾಮದ ರೈತ ಚನ್ನಪ್ಪ ಎಂಬುವವರ ಪುತ್ರ ರುದ್ರಪ್ಪ ಎಂಬ ರೈತ, 8 ವರ್ಷಗಳ ಹಿಂದೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಹಾವೇರಿ ರೈತರು ಆರೋಪಿಸಿದ್ದಾರೆಂದು ವರದಿ ಪ್ರಕಟ ಮಾಡಿರುತ್ತಾರೆ. ಆದರೆ ಮೃತ ರುದ್ರಪ್ಪ ತಂದೆ ಚನ್ನಪ್ಪ ಬಾಳಿಕಾಯಿ ಇತನು ತಮ್ಮ ಆಸ್ತಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದು ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಯಾವುದೇ ರೀತಿ ಪ್ರಕರಣ ದಾಖಲಾಗಿರುವುದಿಲ್ಲ ಎಂದು ತಿಳಿಸಿದ್ದಾರೆ”.
“ದಿನಾಂಕ 06.01.2022 ರಂದು ಚನ್ನಪ್ಪ ಬಾಳಿಕಾಯಿ ಅವರ ಮಗ ರುದ್ರಪ್ಪ ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯಲ್ಲಿ 3 ಲಕ್ಷ ಹಾಗೂ ಖಾಸಗಿಯಾಗಿ 4 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದು, ಅತೀ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿದ್ದರಿಂದ ಮನ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಅವರ ತಂದೆ ಚನ್ನಪ್ಪ ಬಾಳಿಕಾಯಿ ದೂರು ನೀಡಿದ್ದು, ಆಡೂರ ಪೊಲೀಸ್ ಠಾಣೆ ಯುಡಿಆರ್ ಸಂಖ್ಯೆ: 03/2022, ಕಲಂ: 174 ಸಿಆರ್‌ಪಿಸಿ ಪ್ರಕಾರ ಯುಡಿಆರ್ ದಾಖಲಿಸಿಕೊಳ್ಳಲಾಗಿದೆ. ಅದರಲ್ಲಿ ತಮ್ಮ ಆಸ್ತಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಯಾವುದೇ ರೀತಿ ನಮೂದಿಸಿರುವುದಿಲ್ಲ”.
“ಮೃತರ ಬಗ್ಗೆ ಆಡೂರ ಪಿಎಸ್‌ಐ ರವರು ತನಿಖೆ ಕೈಗೊಂಡು, ಬೆಳೆ ಹಾನಿಯಾಗಿದ್ದರಿಂದ ಸಾಲ ಮಾಡಿದ್ದಕ್ಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಅಂತಿಮ ವರದಿಯನ್ನು ಹಾನಗಲ್ ತಹಶೀಲ್ದಾರ್ ರಿಗೆ ಸಲ್ಲಿಸಿರುತ್ತಾರೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗಿರುತ್ತದೆ” ಎಂದು ಫ್ಯಾಕ್ಟ್ ಚೆಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.