ಬಿಜೆಪಿ-ಜೆಡಿಎಸ್ ನಾಯಕರ ಸುಳ್ಳು, ಅಪಪ್ರಚಾರಗಳ ನಡುವೆ ʼಗ್ಯಾರಂಟಿʼ ಗೆಲ್ಲುತ್ತಿದೆ : ಸಿಎಂ ಸಿದ್ದರಾಮಯ್ಯ

Update: 2024-11-07 18:11 GMT

ಬೆಂಗಳೂರು : ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 12 ತಿಂಗಳ 24 ಸಾವಿರ ಹಣ ಕೂಡಿಟ್ಟು ಹೊಲಿಗೆ ಯಂತ್ರ ಖರೀದಿಸಿ, ತನ್ನ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಬದುಕಿನ ಹಾದಿ ರೂಪಿಸಿಕೊಟ್ಟು ತಾಯ್ತನವನ್ನು ಮೆರೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.

ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬಡತನದಲ್ಲೂ ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ನೆರವಾಗುವುದೇ ನಮ್ಮ ಯೋಜನೆಯ ಉದ್ದೇಶವೂ ಆಗಿದೆ. ಈ ತಾಯಿಯ ಸಂಕಲ್ಪಕ್ಕೆ ನನ್ನ ಪ್ರಣಾಮ. ಇದು ನನ್ನ ರಾಜಕೀಯ ಬದುಕಿನ ಮತ್ತೊಂದು ಸಾರ್ಥಕ ಕ್ಷಣ ಎಂದು ತಿಳಿಸಿದ್ದಾರೆ.

ನಮ್ಮ ಗ್ಯಾರಂಟಿಗಳ ಬಗ್ಗೆ ದೇಶದ ಪ್ರಧಾನಿಯೇ ಅಪಪ್ರಚಾರಕ್ಕೆ ಇಳಿದಿರುವ, ಇಡೀ ಬಿಜೆಪಿ ಪಕ್ಷ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲೆಂದು ದಿನವಿಡೀ ಜಪಿಸುತ್ತಿರುವ ಹೊತ್ತಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗ್ಯಾರಂಟಿ ವಿರೋಧಿಗಳೆಲ್ಲರಿಗೂ ತಪರಾಕಿ ಬಾರಿಸಿದಂತಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ-ಜೆಡಿಎಸ್ ನಾಯಕರ ಸುಳ್ಳು, ಅಪಪ್ರಚಾರಗಳ ನಡುವೆ ನಮ್ಮ ಗ್ಯಾರಂಟಿ ಯೋಜನೆ ಗೆಲ್ಲುತ್ತಿದೆ, ಜನರ ಬದುಕು ಬದಲಿಸುತ್ತಿದೆ. ಟೀಕೆಗಳು ಸಾಯುತ್ತಿವೆ, ಕೆಲಸಗಳು ಕಾಣುತ್ತಿವೆ. ಇನ್ನಾದರೂ ಗ್ಯಾರಂಟಿ ವಿರೋಧಿಗಳ ಕಣ್ಣು ತೆರೆಯಲಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News