ಹಾಸನ ರೌಡಿಸಂ ಮುಕ್ತ ನಗರವನ್ನಾಗಿಸುವುದೇ ನಮ್ಮ ಗುರಿ: ನೂತನ ಎಸ್ಪಿ ಮೊಹಮ್ಮದ್ ಸುಜೀತಾ
ಹಾಸನ, ಸೆ.7: ʼಹಾಸನ ನಗರವನ್ನು ರೌಡಿಸಂ ಮುಕ್ತ ನಗರವನ್ನಾಗಿಸುವುದೇ ನಮ್ಮ ಗುರಿʼ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಎಂ.ಎಸ್. ಸುಜೀತಾ ಹೇಳಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಈ ಹಿಂದೆ ಇದ್ದ ಎಸ್ಪಿ ಹರಿರಾಂ ಶಂಕರ್ ಅವರು ಒಳ್ಳೆಯ ಕೆಲಸವನ್ನು ಮಾಡಿದ್ದು, ಆ ಕೆಲಸವನ್ನೇ ಮುಂದುವರಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಗುರಿ ಎಂದರೆ ಜನಸ್ನೇಹಿ ಪೊಲೀಸ್ ಇಲಾಖೆ ಮಾಡುವುದಾಗಿದೆ. ಪೊಲೀಸ್ ಠಾಣೆಗೆ ಬರುವವರ ಸಮಸ್ಯೆ, ಕಷ್ಟ ಸುಖವನ್ನು ಆಲಿಸಿ ವಿಚಾರಣೆ ಮಾಡಿ, ಯಾವ ರೀತಿಯಲ್ಲಿ ಕಾನೂನು ಸಹಾಯ ಮಾಡಬಹುದು ಅಂತವರಿಗೆ ನೂರರಷ್ಟು ಸಹಕಾರ ಕೊಡಬೇಕುʼ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.
ʼಈಗಾಗಲೇ ನಮ್ಮ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಕೂಡ ಮಾಡಲಾಗಿದ್ದು, ನನಗೆ ಭರವಸೆ ಇದ್ದು, ಉತ್ತಮ ಕೆಲಸವನ್ನು ಮುಂದುವರಿಸಲಿದ್ದಾರೆʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ʼʼಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಮಾಡುವುದು ನಮ್ಮ ಮುಂದೆ ಇದ್ದು, ಹಿಂದಿನ ಎಸ್ಪಿ ಈ ಬಗ್ಗೆ ಬಹಳಷ್ಟು ಕಾಳಜಿವಹಿಸಿ ಹೆಚ್ಚಿನ ಕೆಲಸ ಮಾಡಿದ್ದು, ಅದನ್ನು ಮುಂದುವರಿಸಲಾಗುವುದು. ಆದಷ್ಟು ಟ್ರಾಫಿಕ್ ಸುಧಾರಣೆ ಮಾಡುವಲ್ಲಿ ಮುಂದಾಗುತ್ತೇವೆ. ಯಾರಿಗಾದರೂ ಕಷ್ಟವಿದ್ದರೆ ಪೊಲೀಸ್ ಠಾಣೆಯಾಗಿರಲಿ, ಎಸ್ಪಿ ಕಚೇರಿ ಆಗಿರಲಿ ಬರಬಹುದು. ನಾವಿರುವುದೇ ನಿಮ್ಮ ಕಷ್ಟ ಸುಖ ಕೇಳುವುದಕ್ಕೆ. ಪೊಲೀಸ್ ಠಾಣೆಗಳಲ್ಲಿ ಏನಾದರೂ ಲೋಪ ದೋಷ ಕಂಡು ಬಂದರೆ ನಮಗೆ ಮಾಹಿತಿ ಕೊಡಿ. ಯಾವುದೇ ರೀತಿ ಕಾನೂನು ಬಾಹಿರ ಚಟುವಟಿಕೆಗಳಿಗೆ ನಾವು ಪ್ರೋತ್ಸಾಹ ಕೊಡುವುದಿಲ್ಲ. ರೌಡಿಸಂ ನಿಯಂತ್ರಿಸುವುದು ನಮ್ಮ ಪ್ರಮುಖ ಕೆಲಸʼʼ ಎಂದು ಹೇಳಿದರು.