ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರಕಾರ ಸಹಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

Update: 2024-04-06 14:33 GMT

ಬೆಂಗಳೂರು: ‘ಹೆಣ್ಣಿಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಗುಲಾಮರನ್ನಾಗಿ ಮಾಡಿ ಮನೆಯೊಳಗೆ ಕೂರಿಸಿದ ಮನುವಾದದ ಸಂಕೋಲೆಯನ್ನು ಮಹಿಳೆಯರೇ ಕಿತ್ತುಹಾಕಿ ಸ್ವತಂತ್ರರಾಗುತ್ತಿದ್ದಾರೆ. ಸಂವಿಧಾನದತ್ತ ಸ್ವಾತಂತ್ರ್ಯದೊಂದಿಗೆ ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪತಿಯನ್ನು ಕಳೆದುಕೊಂಡು ಹೆಣ್ಣುಮಕ್ಕಳು ವೈಯಕ್ತಿಕ ಬದುಕಿನ ನೋವುಗಳನ್ನು ನುಂಗಿಕೊಂಡು ಸಾಮಾಜಿಕ ಮತ್ತು ಔದ್ಯಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗುತ್ತಿದ್ದಾರೆ. ಈ ಸಾಮಾಜಿಕ ಬದಲಾವಣೆಯಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿಯವರಂತಹ ಮಹನೀಯರ ಸಮಾಜ ಸುಧಾರಣೆಯ ಕೊಡುಗೆಯೂ ಇದೆ ಎಂದು ಉಲ್ಲೇಖಿಸಿದ್ದಾರೆ.

‘ಹೀಗಿದ್ದರೂ ಇತಿಹಾಸದ ಚಕ್ರವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನವನ್ನು ಕೆಲವು ಕಿಡಿಗೇಡಿಗಳು ನಡೆಸುತ್ತಿದ್ದಾರೆ. ಇತ್ತೀಚೆಗೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಪತಿಯನ್ನು ಕಳೆದುಕೊಂಡ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನಿಸಿ ತಮ್ಮ ವಿಕೃತಿಯನ್ನು ಮೆರೆಯುತ್ತಿರುವುದು ಖಂಡನೀಯ’ ಎಂದು ಅವರು ತಿಳಿಸಿದ್ದಾರೆ.

‘ಇದು ಸಂವಿಧಾನವನ್ನು ತಿರಸ್ಕರಿಸಿ ಮನುವಾದವನ್ನು ಪುರಸ್ಕರಿಸಬೇಕೆಂದು ಕೆಲವು ಸಮಾಜ ವಿರೋಧಿ ಶಕ್ತಿಗಳು ಹಾಕುತ್ತಿರುವ ಕೂಗಿನ ಫಲ. ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರಕಾರ ಖಂಡಿತ ಸಹಿಸುವುದಿಲ್ಲ, ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News