ಕೇಂದ್ರ ಸರಕಾರದ ಅನ್ಯಾಯದ ವಿರುದ್ಧ ʼನಮ್ಮ ತೆರಿಗೆ ನಮ್ಮ ಹಕ್ಕುʼ ಹೋರಾಟ : ಡಿಸಿಎಂ ಡಿ.ಕೆ.ಶಿವಕುಮಾರ್‌

Update: 2024-10-12 07:48 GMT

 ಡಿ.ಕೆ.ಶಿವಕುಮಾರ್‌

ಬೆಂಗಳೂರು : ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಬಹಳ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಪ್ರದೇಶ, ಉತ್ತರ ಭಾರತದ ರಾಜ್ಯಗಳು ಹಾಗೂ ಆಂಧ್ರ ಪ್ರದೇಶಕ್ಕಿಂತಲೂ ನಮಗೆ ಬಹಳ ಕಡಿಮೆ ಅನುದಾನ ಸಿಕ್ಕಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ವಿರುದ್ಧ "ನಮ್ಮ ತೆರಿಗೆ ನಮ್ಮ ಹಕ್ಕು" ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಆಂಧ್ರ ಪ್ರದೇಶದಿಂದ ಹೆಚ್ಚು ತೆರಿಗೆ ಹೋಗುವುದೇ ಇಲ್ಲ. ಅವರಿಗಿಂತ ನಮಗೆ ಕಡಿಮೆ ಪಾಲು ಸಿಗುತ್ತಿದೆ. ಈ ಅನ್ಯಾಯದ ಬಗ್ಗೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಯಾಕೆ ಧ್ವನಿ ಎತ್ತಿಲ್ಲ?. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಹಣಕಾಸು ಮಂತ್ರಿಯಾಗಿದ್ದಾರೆ. ನಮ್ಮ ರಾಜ್ಯದ 3-4 ಕೇಂದ್ರ ಸಚಿವರಿದ್ದರೂ ಅವರು ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ನೋಡಿಕೊಂಡು ಕೂತಿದ್ದಾರಲ್ಲಾ ಇದು ನಿಜಕ್ಕೂ ಆಘಾತಕಾರಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಮನಮೋಹನ್ ಸಿಂಗ್ ಕಾಲದಲ್ಲಿ ಎಷ್ಟು ಬಂದಿತ್ತು, ಈಗ ಎಷ್ಟು ಬಂದಿದೆ ಎಂಬುದನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡೋಣ, ಈಗ ನಮ್ಮ ಹೋರಾಟಕ್ಕೆ ಬಿಜೆಪಿ ನಾಯಕರು ಕೈ ಜೋಡಿಸಲಿ" ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬಿವೆ :

"ಮೈಸೂರು ದಸರಾ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಾಡದೇವಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಾಡಿನಲ್ಲಿ ಉತ್ತಮ ಮಳೆಯಾಗಿದೆ. ನೀರಿಗಾಗಿ ಜನರು ಹಾಗೂ ತಮಿಳುನಾಡು ವಿರುದ್ಧದ ಹೋರಾಟ ನಿಂತಿದೆ. ರಾಜ್ಯದ ಎಲ್ಲಾ ಅಣೆಕಟ್ಟುಗಳು ತುಂಬಿವೆ. ನಾವು ಕೇವಲ ಆರು ದಿನಗಳಲ್ಲಿ ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಮಾಡಿದ್ದೇವೆ. ಮತ್ತೆ ಅಣೆಕಟ್ಟು ತುಂಬಿ ಬಾಗಿನ ಅರ್ಪಣೆ ಮಾಡಿದ್ದೇವೆ" ಎಂದರು.

ದೀಪಾಲಂಕಾರ 10-12 ದಿನಗಳ ಕಾಲ ವಿಸ್ತರಣೆ :

ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯುತ್ ದೀಪಾಲಂಕಾರವನ್ನು 10-12 ದಿನಗಳವರೆಗೆ ವಿಸ್ತರಣೆ ಮಾಡಲಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ನಾನು ಇಂಧನ ಸಚಿವನಾಗಿದ್ದಾಗ ಮಾಡಿದ್ದಕ್ಕಿಂತ ಈ ಬಾರಿ ಅತ್ಯುತ್ತಮವಾಗಿ ದೀಪಾಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News