ಬೆಂಗಳೂರು| ವಸ್ತ್ರಧಾರಣೆ ವಿಚಾರದಲ್ಲಿ ಪತ್ರಕರ್ತನ ಪತ್ನಿಗೆ ಆ್ಯಸಿಡ್ ಎರಚುವುದಾಗಿ ಬೆದರಿಕೆ; ಪ್ರಕರಣ ದಾಖಲು

ನಿಕಿತ್ ಶೆಟ್ಟಿ (Photo: Etios Services/Instagram)
ಬೆಂಗಳೂರು: ವಸ್ತ್ರಧಾರಣೆ ವಿಚಾರದಲ್ಲಿ ಮಹಿಳೆಯೋರ್ವರಿಗೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ ಆರೋಪಿಯನ್ನು ಆತ ಕೆಲಸ ಮಾಡುತ್ತಿದ್ದ ಕಂಪನಿ ಉದ್ಯೋಗದಿಂದ ವಜಾಗೊಳಿಸಿದ್ದು, ಈ ಬಗ್ಗೆ ಆರೋಪಿ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದಾರೆ.
ನಿಕಿತ್ ಶೆಟ್ಟಿ ಎಂಬಾತ ಪತ್ರಕರ್ತ ಶಹಬಾಝ್ ಅನ್ಸಾರ್ ಎಂಬವರ ಪತ್ನಿಗೆ ವಸ್ತ್ರಧಾರಣೆ ವಿಚಾರದಲ್ಲಿ ಆ್ಯಸಿಡ್ ಎರಚುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದು, ಈ ಕುರಿತ ಪೋಸ್ಟ್ ಭಾರೀ ವೈರಲ್ ಆಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಪತ್ರಕರ್ತ ಶಹಬಾಝ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಜಿಪಿಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೃತ್ಯವನ್ನು ತಡೆಯುವಂತೆ ಕೇಳಿಕೊಂಡಿದ್ದರು.
ಬೆದರಿಕೆ ಬೆನ್ನಲ್ಲೇ ನಿಕಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪೆನಿ ಆತನನ್ನು ಉದ್ಯೋಗದಿಂದ ವಜಾಗೊಳಿಸಿದ್ದು, ನಿಕಿತ್ ಶೆಟ್ಟಿ ಬೆದರಿಕೆಯ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಇಟಿಯೋಸ್ ಸರ್ವಿಸಸ್ ಹೇಳಿದೆ.