ಪ್ಯಾರಾ ಏಷ್ಯನ್ ಗೇಮ್ಸ್ : ಚಿನ್ನದ ಪದಕ ಗೆದ್ದ ಮೂಡಿಗೆರೆಯ ರಕ್ಷಿತಾ ರಾಜು

Update: 2023-10-26 15:24 GMT

ಚಿಕ್ಕಮಗಳೂರು, ಅ.26: ಚೀನಾ ದೇಶದ ಹಾಂಗ್‍ಜಾವ್‍ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಾಫಿನಾಡಿನ ಯುವತಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶ, ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಡ್ಡಳ್ಳಿ ನಿವಾಸಿಯಾಗಿರುವ ರಕ್ಷಿತಾ ರಾಜು 1500 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು, ಸ್ಪರ್ಧೆಯಲ್ಲಿ ಅವರು ಭಾರತದವರೇ ಆದ ಕಿಲ್ಲಕ ಲಲಿತಾ ಹಾಗೂ ಕಝಕಿಸ್ತಾನ್‍ನ ಜುಜ್ಬೇವಾ ಗುಲ್ನಾಜ್ ಅವರನ್ನು ಹಿಂದಿಕ್ಕಿ 5.21 ಸೆಕೆಂಡಿನಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

ರಕ್ಷಿತಾ ರಾಜು ಅವರು ಚಿಕ್ಕಮಗಳೂರು ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ ಪ್ಯಾರಿಸ್‍ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿ 1500 ಮೀ. ಓಟದ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿದ್ದರು. ಅಂದು ರಕ್ಷಿತಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು. ಈ ಬಾರಿ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ರಕ್ಷಿತಾ ರಾಜು ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಮತ್ತೊಮ್ಮೆ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕೋಚ್ ರಾಹುಲ್ ಬಾಲಕೃಷ್ಣ ಕೂಡ 1500ಮೀ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ಶಾರ್ಜಾ ಅಂತರ್ ರಾಷ್ಟ್ರೀಯ ಮುಕ್ತ ಪ್ಯಾರ ಅಥ್ಲೆಟಿಕ್ಸ್ ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗಳಿಸಿದ್ದ ರಕ್ಷಿತಾ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1,500 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡಿದ್ದರು. ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400, 800 ಹಾಗೂ 1500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದು, ಪುಣೆಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನ 400 ಹಾಗೂ 1500ಮೀ ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ರಕ್ಷಿತಾ ಅವರ ತಂದೆ ರಾಜು ಅವರು ಮೂಲತಃ ಮೂಡಿಗೆರೆ ತಾಲೂಕಿನ ದೇವರುಂದ ಗ್ರಾಮದವರು. ಅವರು ವಿವಾಹ ನಂತರ ಗುಡ್ನಳ್ಳಿಯಲ್ಲಿ ಕುಟುಂಬ ಸಮೇತ ನೆಲೆಸಿದ್ದರು. ಹುಟ್ಟಿನಿಂದಲೇ ಅಂಧರಾಗಿದ್ದ ರಕ್ಷಿತಾ ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದು, ತನ್ನ ಚಿಕ್ಕಮ್ಮನ ಆರೈಕೆಯಲ್ಲಿ ಬೆಳೆದಿದ್ದರು. ರಕ್ಷಿತಾ ಚಿಕ್ಕಮಗಳೂರಿನ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಕ್ರೀಡೆಯ ಕಡೆಗೆ ಆಸಕ್ತಿ ಬೆಳೆಸಿಕೊಂಡರು. ಶಾಲೆಯ ಸಂಸ್ಥಾಪಕಾದ ಡಾ.ಜೆ.ಪಿ.ಕೃಷ್ಣೇಗೌಡ ಅವರು ರಕ್ಷಿತಾಳ ಪ್ರತಿಭೆ ಗುರುತಿಸಿ ಹೆಚ್ಚಿನ ‌ಪ್ರೋತ್ಸಾಹ ನೀಡಿದ್ದಾರೆ. ರಕ್ಷಿತಾ ಅವರಿಗೆ ಅವರ ಕೋಚ್ ರಾಹುಲ್ ಹೆಚ್ಚಿನ ಪ್ರೇರೇಪಣೆ ನೀಡಿದ್ದಾರೆ. ರಕ್ಷಿತಾ ಪ್ರಸ್ತುತ ಬೆಂಗಳೂರಿನಲ್ಲಿ ಕ್ರೀಡಾ ವಸತಿ ನಿಲಯದಲ್ಲಿ ಇದ್ದುಕೊಂಡು ಪಿ.ಯು.ಸಿ.ವ್ಯಾಸಂಗ ಮಾಡುತ್ತಿದ್ದಾರೆ.

ಅಂಧಳಾಗಿದ್ದರೂ ತನ್ನ ಛಲ ಮತ್ತು ಪ್ರಯತ್ನದಿಂದ ವಿಶ್ವಮಟ್ಟದಲ್ಲಿ ಸಾಧನೆ ಮಾಡಿ ಜಿಲ್ಲೆಗೆ, ದೇಶಕ್ಕೆ ಹೆಮ್ಮೆ ತಂದಿರುವ ರಕ್ಷಿತಾ ಅವರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಸಾರ್ವಜನಿಕರು ಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News