ಪೇ ಚಲುವರಾಯಸ್ವಾಮಿ ಅಭಿಯಾನ: ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ‘ಪೇ ಚಲುವರಾಯಸ್ವಾಮಿ’ ಪೋಸ್ಟರ್ ಅಭಿಯಾನ ನಡೆಸಲಾಗಿದೆ ಎಂಬ ಆರೋಪದಡಿ ಮಂಡ್ಯದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಬಿಜೆಪಿ ಕಾರ್ಯಕರ್ತರಾದ ಸಿ.ಟಿ.ಮಂಜುನಾಥ್, ಎಸ್.ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವಕುಮಾರ್ ಮತ್ತು ವಿನೂ ಭಾಯ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು.
ಪ್ರಕರಣವೇನು?: ಅರ್ಜಿದಾರರು ಸಚಿವ ಚಲುರಾಯಸ್ವಾಮಿ ಮತ್ತು ಸರಕಾರದ ವಿರುದ್ಧ ಪೇ ಸಿಎಸ್/ಪೇ ಚೆಲುವರಾಯಸ್ವಾಮಿ ಅಭಿಯಾನದ ಹೆಸರಿನಲ್ಲಿ 2023ರ ಆಗಸ್ಟ್ 10ರಂದು ಮಂಡ್ಯದ ಸಂಜಯ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂಬಂಧ ಐವರ ವಿರುದ್ಧ ಪೊಲೀಸರು ಅಂದೇ ಎಫ್‍ಐಆರ್ ದಾಖಲು ಮಾಡಿದ್ದರು. ಈ ಸಂಬಂಧ 2023ರ ಆ.30ರಂದು ಮಂಡ್ಯದ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.