ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ..: ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972 ಏನು ಹೇಳುತ್ತದೆ?

Update: 2023-10-26 15:38 GMT

Photo - PTI

ಬೆಂಗಳೂರು: ಅರಣ್ಯ ಇಲಾಖೆ ಕಾನೂನಿನ ಬಗ್ಗೆ ಮಾಹಿತಿ ಕೊರತೆ ಇರುವ ಕಾರಣ, ಕಾಯ್ದೆ ಸೇರಿದಂತೆ ಇತರೆ ಕಾನೂನಿನ ಉಲ್ಲಂಘನೆ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ. \

ʼಬಿಗ್‌ಬಾಸ್‌ʼ ಮನೆಯಲ್ಲಿದ್ದ ವರ್ತೂರು ಸಂತೋಷ್‌ ಹುಲಿ ಉಗುರುಳ್ಳ ಚಿನ್ನದ ಸರ ಧರಿಸಿದ್ದ ಕಾರಣ ವನ್ಯಜೀವಿ ಕಾಯ್ದೆಯಡಿ ಅವರನ್ನು ಬಂಧಿಸಿದ ಪ್ರಕರಣದ ಬಳಿಕ ಹುಲಿ ಉಗುರು ಸೇರಿ ವನ್ಯಜೀವಿಗಳ ಅಂಗಾಂಗ ಹೊಂದುವುದು ಅಪರಾಧ ಎಂಬುದು ಅನೇಕ ಜನರಿಗೆ ಈಗ ಮನದಟ್ಟಾಗಿದೆ. 

ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972 ಏನು ಹೇಳುತ್ತದೆ?

-ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳ ಅಂಗಾಂಗ, ಅವಶೇಷಗಳ ಮಾರಾಟ ಅಥವಾ ಬಳಕೆಗೆ ಸಂಪೂರ್ಣ ನಿಷೇಧವಿದೆ.

-ಯಾವುದೇ ಜೀವಿಯನ್ನು ಜೀವಂತವಾಗಿ ಅಥವಾ ಮೃತಪಟ್ಟ ಬಳಿಕ ಮಾರಾಟ ಮಾಡುವಂತಿಲ್ಲ.

-ಕಾಡು ಪ್ರಾಣಿಗಳ ಚರ್ಮವನ್ನು ಹದ ಮಾಡಿ ಅಲಂಕಾರಿಕ ವಸ್ತುಗಳಾಗಿ ಬಳಸುವಂತಿಲ್ಲ.

-ವನ್ಯಜೀವಿಗಳ ಮಾಂಸ ಮಾರಾಟ ಹಾಗೂ ಭಕ್ಷಣೆ ಸಹ ಅಪರಾಧ.

-ಹಾವಿನ ವಿಷವನ್ನೂ ಸಂಗ್ರಹ ಮಾಡುವಂತಿಲ್ಲ. ನವಿಲು ಗರಿಗಳನ್ನೂ ಸಂಗ್ರಹಿಸುವಂತಿಲ್ಲ.

-ವನ್ಯಜೀವಿಗಳ ಕೂದಲು, ಚರ್ಮ, ಉಗುರು, ಗೊರಸು, ಹಲ್ಲು, ಆನೆ ದಂತ ಸೇರಿದಂತೆ ದೇಹದ ಯಾವುದೇ ಭಾಗವನ್ನು ಸಂಗ್ರಹಿಸುವುದು, ಸಾಗಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. 

́ವನ್ಯಜೀವಿ ಕಾಯ್ದೆ’ ಕುರಿತು ಪ್ರಚಾರಕ್ಕೆ ಕ್ರಮ: ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ

ಬೆಂಗಳೂರು, ಅ. 26: ‘ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಕಾಯ್ದೆ ಸೇರಿದಂತೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಇತರೆ ಕಾನೂನುಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅರಣ್ಯ ಇಲಾಖೆಯಿಂದ ಕ್ರಮವಹಿಸಲಾಗುವುದು’ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

‘ಅರಣ್ಯ ಇಲಾಖೆ ಕಾನೂನಿನ ಬಗ್ಗೆ ಮಾಹಿತಿ ಕೊರಿತೆ ಇರುವ ಕಾರಣ, ಕಾಯ್ದೆ ಸೇರಿದಂತೆ ಇತರೆ ಕಾನೂನಿನ ಉಲ್ಲಂಘನೆ ಸಾರ್ವಜನಿಕ ವಲಯದಲ್ಲಿ ಕಂಡುಬರುತ್ತಿದೆ. ರಿಯಾಲಿಟಿ ಶೋ ಸ್ಪರ್ಧಿಯಾದ ವರ್ತೂರು ಸಂತೋಷ ಹುಲಿ ಉಗುರು ಧಾರಣೆಯ ಪ್ರಕರಣದ ನಂತರ ಇಲ್ಲಿಯವರೆಗೆ 8 ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಕಾನೂನಿನ ಪ್ರಕಾರ ಕ್ರಮವಹಿಸಲಾಗುವುದು’ ಎಂದು ಸಚಿವರು ಹೇಳಿದ್ದಾರೆ. 

ವನ್ಯಜೀವಿ ಉತ್ಪನ್ನ ಮರಳಿಸಲು ಕೊನೆ ಅವಕಾಶ?

ʼಹುಲಿ ಉಗುರಿನ ಲಾಕೆಟ್ ಧರಿಸಿದವರ ವಿರುದ್ಧ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಕಾನೂನಿನ ಅರಿವಿಲ್ಲ ಎಂಬುದು ಸ್ಪಷ್ಟ. ಅಕ್ರಮ ವನ್ಯಜೀವಿ ಉತ್ಪನ್ನಗಳನ್ನು ಸರಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡಲು ಪರಾಮರ್ಶಿಸಲಾಗುತ್ತಿದೆ. 2005ರ ವರೆಗೆ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲಕತ್ವದ ಹಕ್ಕು ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ 2022ರಲ್ಲಿ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ವನ್ಯಜೀವಿ ಉತ್ಪನ್ನದ ಅಕ್ರಮ ದಾಸ್ತಾನನ್ನು ಸರಕಾರಕ್ಕೆ ಮರಳಿಸಲು ಅವಕಾಶ ಕಲ್ಪಿಸಲಾಗಿದೆ’

-ಈಶ್ವರ್ ಬಿ.ಖಂಡ್ರೆ ಅರಣ್ಯ ಸಚಿವರು

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News