ಗ್ಯಾರಂಟಿಗಳಿಂದ ಜನತೆ ಸಾಲದ ಶೂಲಕ್ಕೆ ಸಿಲುಕಲಿದ್ದಾರೆ: ಎಚ್.ಡಿ. ಕುಮಾರಸ್ವಾಮಿ

Update: 2024-04-21 13:19 GMT

ಬೆಂಗಳೂರು: ‘ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಈ ಚುನಾವಣೆಯಲ್ಲಿ ಧೂಳಿಪಟವಾಗಲಿದೆ. ಜನರಿಗೆ ಕಾಂಗ್ರೆಸ್‍ನ ಪೊಳ್ಳು ಗ್ಯಾರಂಟಿಗಳು ಅರ್ಥವಾಗಿವೆ. ಗ್ಯಾರಂಟಿಗಳಿಂದ ತಮ್ಮನ್ನು ಸಾಲದ ಶೂಲಕ್ಕೆ ಸಿಲುಕಿಸುತ್ತಾರೆಂಬುದು ಜನರಿಗೆ ಗೊತ್ತಾಗಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಟೀಕಿಸಿದ್ದಾರೆ.

ರವಿವಾರ ಇಲ್ಲಿನ ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರಧಾನಿ ಮೋದಿಯವರು ಜನ ಕಲ್ಯಾಣಕ್ಕೆ ಜಾರಿಗೊಳಿಸಿರುವ ಯೋಜನೆಗಳ ಪರ ಜನರು ಮತ ಹಾಕಲಿದ್ದಾರೆ. ರಾಜ್ಯಕ್ಕೆ ಮೋದಿಯವರ ಕೊಡುಗೆ ಅಪಾರ. ಎಲ್ಲ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಐದು ವರ್ಷಗಳಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಮನೆಯೂ ಇದೇ ಕ್ಷೇತ್ರದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿಯನ್ನು ಅವರು ಹೊಂದಿದ್ದಾರೆ. ಯುವಕರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ಸೂರ್ಯ ಉತ್ತಮ ಸಂಸದೀಯ ಪಟುವಾಗಿರುವುದು ಸಂತೋಷದ ವಿಷಯ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ತೇಜಸ್ವಿ ಸೂರ್ಯ ಮಾತನಾಡಿ, ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕ್ಷೇತ್ರದಲ್ಲಿನ ನನ್ನ ಕಾರ್ಯಗಳಿಗೆ ಅನೇಕ ಬಾರಿ ಶ್ಲಾಘಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿರುವುದು ನನಗೆ ಶ್ರೀರಕ್ಷೆ. ಕುಮಾರಣ್ಣ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರಕ್ಕೆ ಬಂದು ಬೆಂಬಲ ಸೂಚಿಸಿರುವುದು ಮತ್ತಷ್ಟು ಆನೆಬಲ ಬಂದಂತಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News