ಮುಡಾ ಪ್ರಕರಣ | ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Update: 2024-09-12 14:29 GMT
ಸಿದ್ದರಾಮಯ್ಯ

ಬೆಂಗಳೂರು : ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ‌.ನಾಗಪ್ರಸನ್ನ ಅವರಿದ್ದ ಪೀಠವು ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಪ್ರೊ.ರವಿವರ್ಮ ಕುಮಾರ್, ಸರಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ದೂರವಾದ ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ಅವರ ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು. ರಾಜ್ಯಪಾಲರು ಜನರಿಂದ ಆಯ್ಕೆಯಾಗಿಲ್ಲ, ನೇಮಕಗೊಂಡಿದ್ದಾರೆ. ಹೀಗಾಗಿ ರಾಜ್ಯಪಾಲರಿಗೆ ಹೆಚ್ಚಿನ ಉತ್ತರದಾಯಿತ್ವವಿದೆ ಎಂದು ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ತೀರ್ಪು ಉಲ್ಲೇಖಿಸಿದರು.

ಈ ವೇಳೆ ರಾಷ್ಟ್ರಪತಿ ಆಳ್ವಿಕೆ ಹೇರಿದ ಪ್ರಕರಣಗಳು 17ಎ ಕೇಸ್‌ಗಿಂತ ಗಂಭೀರವಲ್ಲವೇ? ಆರ್ಟಿಕಲ್ 356 ತೀರ್ಪುಗಳನ್ನು ಸೆಕ್ಷನ್‌ 17ಎ ಕೇಸ್‌ಗೆ ಉಲ್ಲೇಖಿಸುವುದು ಸೂಕ್ತವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ರಾಜ್ಯಪಾಲರು 23 ವರ್ಷ ಹಳೆಯ ಪ್ರಕರಣದ ತನಿಖೆಗೆ ಅನುಮತಿ ನೀಡಿದ್ದಾರೆ. ರಾಷ್ಟ್ರಪತಿ ಆಳ್ವಿಕೆಗಿಂತ ಇದು ಹೆಚ್ಚು ರಾಜಕೀಯಪ್ರೇರಿತ. ಸೆಕ್ಷನ್17ಎ ಅಡಿ ಅನುಮತಿ ನೀಡುವಾಗ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಪಾಲಿಸದಿದ್ದರೆ ಅದಕ್ಕೆ ಸೂಕ್ತ ಕಾರಣ ನೀಡುವ ಹೊಣೆ ರಾಜ್ಯಪಾಲರ ಮೇಲಿದೆ. ಎಲ್ಲಾ ಪ್ರಕರಣಗಳಲ್ಲೂ ಸಚಿವ ಸಂಪುಟ ಸಿಎಂ ಪರ ತಾರತಮ್ಯ ಮಾಡಿದೆ ಎನ್ನಲಾಗದು. ಸಚಿವ ಸಂಪುಟದ ಸಭೆಯಲ್ಲಿ ಮಂತ್ರಿಗಳು ಬೇರೆ ಬೇರೆ ಅಭಿಪ್ರಾಯ ಮಂಡಿಸಬಹುದು ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.‌

ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸು ಪಾಲಿಸಲೇಬೇಕೆಂದಿಲ್ಲ. ಆದರೆ ಭಿನ್ನ ನಿಲುವಿಗೆ ಕಾರಣ ನೀಡಬೇಕೆಂಬುದು ನಿಮ್ಮ ವಾದವೇ? ಎಂದು ನ್ಯಾಯಮೂರ್ತಿಗಳು ಕೇಳಿದ್ದಾರೆ. ಸಚಿವ ಸಂಪುಟದ ಶಿಫಾರಸನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸ್ಸು ತಪ್ಪು ಏಕೆ ಎಂದು ಹೇಳಿಲ್ಲ. ಹೀಗಾಗಿ ಕಾರಣವೇ ಹೇಳದೆ ಸಚಿವ ಸಂಪುಟದ ಕ್ರಮ ತಾರತಮ್ಯಪೂರಿತ ಎನ್ನಲಾಗದು ಎಂದು ಮನು ಸಿಂಘ್ವಿ ವಾದ ಮಂಡಿಸಿದರು.

ಪ್ರೊ.ರವಿವರ್ಮ ಕುಮಾರ್ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು. ವಾದ-ಪ್ರತಿವಾದ ಆಲಿಸಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News