ʼಜಾತಿಗಣತಿʼ ವರದಿ ಬಹಿರಂಗ ನಿರ್ಬಂಧ ಕೋರಿ ಅರ್ಜಿ ; ನಾಳೆ ವಿಚಾರಣೆಗೆ ಹೈಕೋರ್ಟ್ ನಿರ್ಧಾರ

Update: 2024-02-29 14:50 GMT

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಿದ್ದಪಡಿಸಿರುವ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷಾ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ತಡೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ.

2021ರಲ್ಲಿ ಮುಖ್ಯಮಂತ್ರಿ ಚಂದ್ರು ಅವರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗಗೊಳಿಸಲು ನಿರ್ದೇಶನ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ಹಾಸನದ ಹೊಳೆನರಸೀಪುರ ತಾಲೂಕಿನ ವಕೀಲ ಓ.ಕೆ.ರಘು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ರಘು ಪರ ವಕೀಲರು ಗುರುವಾರ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಟಿ.ಜೆ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠದ ಮುಂದೆ ಹಾಜರಾಗಿ, ಜಾತಿ ಸಮೀಕ್ಷೆ ಮಾಡಲು ಆಯೋಗಕ್ಕೆ ಅಧಿಕಾರವೇ ಇಲ್ಲ. ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್‌ ಹೆಗಡೆ ಅವರು ಅಧಿಕಾರ ಅವಧಿ ಇಂದು ಕೊನೆಗೊಳ್ಳಲಿದೆ. ಇದರಿಂದ ಆಯೋಗವು ತರಾತುರಿಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತಿದೆ. ಈ ಆಯೋಗದ ಹಿಂದಿನ ಅಧ್ಯಕ್ಷರು ಸಿದ್ಧಪಡಿಸಿದ್ದ ವರದಿಯನ್ನು ಹಾಲಿ ಅಧ್ಯಕ್ಷರು ಸಲ್ಲಿಕೆ ಮಾಡುತ್ತಿದ್ದಾರೆ. ಹಾಗಾಗಿ, ವರದಿ ಸರಕಾರಕ್ಕೆ ಸಲ್ಲಿಸುವುದಕ್ಕೆ ತಡೆಹಿಡಿಯಬೇಕು ಹಾಗೂ ವರದಿ ಬಹಿರಂಗವಾಗಲು ಅವಕಾಶ ನೀಡದಂತೆ ನಿರ್ಬಂಧಿಸಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ.

ಅಲ್ಲದೆ ಈ ಮಧ್ಯಂತರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು‌. ಅರ್ಜಿ ಮನವಿಗೆ ಪ್ರತಿಕ್ರಿಯಿಸಿದ ಪೀಠ, ವರದಿ ಸಲ್ಲಿಕೆಯ ವಿಚಾರವನ್ನು ನ್ಯಾಯಾಲಯ ಮೇಲ್ವಿಚಾರಣೆ ನಡೆಸಲು ಸಾಧ್ಯವೇ ಎಂದು ರಘು ಪರ ವಕೀಲರನ್ನು ಪ್ರಶ್ನಿಸಿತು. ಈ ವೇಳೆ ಸರಕಾರಿ ವಕೀಲರು ಪ್ರತಿಕ್ರಿಯಿಸಿ, ಆಯೋಗವು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿ ನಡೆಸಿರುವುದನ್ನು ಪ್ರಶ್ನಿಸಿರುವುದನ್ನು ಬುಧವಾರವಷ್ಟೇ ಮತ್ತೊಂದು ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಅದು ಸಾಮಾನ್ಯ ಪ್ರಕ್ರಿಯೆಂತೆ ವಿಚಾರಣೆಗೆ ನಿಗದಿಯಾಗಬೇಕು ಎಂದು ನ್ಯಾಯಪೀಠದ ಉತ್ತರಿಸಿದರು.

ಈ ಕುರಿತು ಪರಿಶೀಲನೆ ನಡೆಸಿದ ವಿಭಾಗೀಯ ಪೀಠ, ರಘು ಅವರ ಮಧ್ಯಂತರ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News