'ಶಕ್ತಿ' ಯೋಜನೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ

Update: 2023-08-01 15:37 GMT

ಬೆಂಗಳೂರು, ಆ.1: ರಾಜ್ಯದಲ್ಲಿ ಮಹಿಳೆಯರಿಗೆ ಕಲ್ಪಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟದ ಜತೆಗೆ ದಿನನಿತ್ಯ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ರಾಜ್ಯದ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಹಾಗೂ ಯಾಶಿಕಾ ಮತ್ತಿತರರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸಾರಿಗೆ ಇಲಾಖೆ, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್‍ಡಬ್ಲ್ಯೂ ಕೆಆರ್‍ಟಿಸಿ, ಕೆಕೆಆರ್‍ಟಿಸಿ ಈ ನಾಲ್ಕು ಸಾರಿಗೆ ನಿಗಮಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಬಸ್‍ಗಳಲ್ಲಿ ಹಿರಿಯ ನಾಗರಿಕರು, ಮಕ್ಕಳು ಬಸ್‍ಗಳಲ್ಲಿ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಇದರಿಂದ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಲಾ ಮಕ್ಕಳು, ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ದೂರದ ಊರುಗಳಿಗೆ ತೆರಳುವ ಬಸ್‍ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‍ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸಬೇಕು. ಟಿಕೆಟ್ ಪಡೆದವರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು. ಶಾಲಾ ಮಕ್ಕಳಿಗೆ ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News