ಬೆಂಗಳೂರಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2024-01-19 14:08 GMT

Photo: X/@CMofKarnataka

ಬೆಂಗಳೂರು: ಜಾಗತಿಕ ತಂತ್ರಜ್ಞಾನ, ಸಂಶೋಧನೆ, ನಾವೀನ್ಯತೆ, ವಿನ್ಯಾಸ ಮತ್ತು ಬೇಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು, ‘ಮೇಕ್ ಇನ್ ಇಂಡಿಯಾ ಮೂಲಕ ಮೇಕ್ ಫಾರ್ ದಿ ವಲ್ರ್ಡ್' ಎಂಬ ನೀತಿ ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶುಕ್ರವಾರ ದೇವನಹಳ್ಳಿ ಸಮೀಪವಿರುವ ಬೆಂಗಳೂರು ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‍ನಲ್ಲಿ ಬೋಯಿಂಗ್ ಇಂಡಿಯಾ ವತಿಯಿಂದ 1600 ಕೋಟಿ ರೂ.ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ‘ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ’ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ‘ಬೋಯಿಂಗ್ ಸುಕನ್ಯಾ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿರುವ ಪ್ರತಿಭೆಗಳ ಮೇಲೆ ವಿಶ್ವದ ನಂಬಿಕೆಯಿದೆ. ಈ ಕ್ಯಾಂಪಸ್‍ನಲ್ಲಿ ಭವಿಷ್ಯದ ವಿಮಾನಗಳು ವಿನ್ಯಾಸಗೊಳ್ಳಲಿವೆ ಎಂಬ ವಿಶ್ವಾಸವಿದೆ. ಬೆಂಗಳೂರು ನಗರವು ಆಕಾಂಕ್ಷೆಗಳನ್ನು ನಾವೀನ್ಯತೆಗಳು ಮತ್ತು ಸಾಧನೆಗಳಿಗೆ ಹಾಗೂ ಭಾರತದ ತಾಂತ್ರಿಕ ಸಾಮಥ್ರ್ಯವನ್ನು ಜಾಗತಿಕ ಬೇಡಿಕೆಗಳಿಗೆ ಜೋಡಿಸುವ ನಗರವಾಗಿದೆ. ಬೋಯಿಂಗ್‍ನ ಹೊಸ ತಂತ್ರಜ್ಞಾನ ಕ್ಯಾಂಪಸ್ ಈ ನಂಬಿಕೆಯನ್ನು ಬಲಪಡಿಸಿದೆ ಎಂದು ಅವರು ಹೇಳಿದರು.

ಇಂದು ಹೊಸದಾಗಿ ಉದ್ಘಾಟನೆಗೊಂಡ ಕ್ಯಾಂಪಸ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್‍ಎ)ದ ಹೊರಗೆ ಇರುವ ಬೋಯಿಂಗ್‍ನ ಅತಿದೊಡ್ಡ ಸೌಲಭ್ಯವಾಗಿದೆ. ಇದು ಕೇವಲ ಭಾರತ ಮಾತ್ರವಲ್ಲ, ವಿಶ್ವದ ವಾಯುಯಾನ ಮಾರುಕಟ್ಟೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಕಳೆದ ವರ್ಷ ಕರ್ನಾಟಕದಲ್ಲಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆಯನ್ನು ತುಮಕೂರು ಜಿಲ್ಲೆಯಲ್ಲಿ ಉದ್ಘಾಟಿಸಲಾಯಿತು. ಇದೀಗ, ಬೋಯಿಂಗ್‍ನ ಹೊಸ ಕ್ಯಾಂಪಸ್ ಉದ್ಘಾಟನೆಯೊಂದಿಗೆ ಕರ್ನಾಟಕವು ವಾಯುಯಾನ ಕ್ಷೇತ್ರದಲ್ಲಿ ಹೊಸ ಕೇಂದ್ರವಾಗಿ ಉದಯಿಸುವುದರ ಸ್ಪಷ್ಟ ಸೂಚನೆಯಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸರಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಮಹಿಳೆಯರ ಸಬಲೀಕರಣದತ್ತ ಭಾರತವು ಇರಿಸಿದ ಹೆಜ್ಜೆಗಳ ಬಗ್ಗೆ ಪುನರುಚ್ಚರಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಯುದ್ಧ ವಿಮಾನಗಳಾಗಲಿ ಅಥವಾ ನಾಗರಿಕ ವಿಮಾನಯಾನವಾಗಲಿ, ಮಹಿಳಾ ಪೈಲಟ್‍ಗಳ ಸಂಖ್ಯೆಯಲ್ಲಿ ಭಾರತವು ವಿಶ್ವವನ್ನು ಮುನ್ನಡೆಸುತ್ತಿದೆ. ಭಾರತದ ಪೈಲಟ್‍ಗಳಲ್ಲಿ ಶೇ.15ರಷ್ಟು ಮಹಿಳೆಯರಿದ್ದಾರೆ, ಇದು ಜಾಗತಿಕ ಸರಾಸರಿಗಿಂತ 3 ಪಟ್ಟು ಹೆಚ್ಚು ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು.

ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ ಪೈಲಟ್ ಆಗುವ ತಮ್ಮ ಕನಸುಗಳನ್ನು ನನಸಾಗಿಸಲು, ಸರಕಾರಿ ಶಾಲೆಗಳಲ್ಲಿ ವೃತ್ತಿ ತರಬೇತಿ ನೀಡುವುದರ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಉತ್ತೇಜನ ನೀಡಲು ಈ ಬೋಯಿಂಗ್ ಸುಕನ್ಯಾ ಯೋಜನೆ ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.

2014ರಲ್ಲಿ ಭಾರತದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಇಂದು ಅವುಗಳ ಸಂಖ್ಯೆ 150 ಆಗಿದೆ. ಇದರಿಂದಾಗಿ, ಆರ್ಥಿಕ ಬೆಳವಣಿಗೆಯ ಜೊತೆಗೆ ಉದ್ಯೋಗ ಸೃಷ್ಠಿಯು ಹೆಚ್ಚಾಗಿದೆ. ಜೊತೆಗೆ, ಏರ್ ಕಾರ್ಗೋ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಯಿಂದಾಗಿ ಅಂತರ್‍ರಾಷ್ಟ್ರೀಯ ಮಾರುಕಟ್ಟೆಗಳಿಗೆ ನಮ್ಮ ಉತ್ಪನ್ನಗಳನ್ನು ಸಾಗಿಸುವುದು ಸುಲಭವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಬೋಯಿಂಗ್ ಮತ್ತು ಇತರ ಅಂತರ್‍ರಾಷ್ಟ್ರೀಯ ಕಂಪೆನಿಗಳು ತಮ್ಮ ಬೆಳವಣಿಗೆಯನ್ನು ಭಾರತದ ಜೊತೆ ಜೋಡಿಸಲು ಇದು ಸರಿಯಾದ ಸಮಯ. ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವುದು 140 ಕೋಟಿ ಭಾರತೀಯರ ಸಂಕಲ್ಪವಾಗಿದೆ. ಕಳೆದ 9 ವರ್ಷಗಳಲ್ಲಿ, ಸುಮಾರು 25 ಕೋಟಿ ಭಾರತೀಯರನ್ನು ಬಡತನದಿಂದ ಮೇಲೆತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

ಬೋಯಿಂಗ್ ಕಂಪೆನಿಯ ಸಿಒಒ ಸ್ಟೆಫನಿ ಪೋಪ್ ಮಾತನಾಡಿ, ಭಾರತದಲ್ಲಿ ವಾಯುಯಾನ ಕ್ಷೇತ್ರದ ಬೆಳವಣಿಗೆ ಹಾಗೂ ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಜಾರಿಗೆ ತರುವಲ್ಲಿ ಪ್ರಧಾನಿಯ ಬದ್ಧತೆಯನ್ನು ಶ್ಲಾಘಿಸಿದರು. ಅಲ್ಲದೆ, ಪ್ರಧಾನಿಯ ನಿರಂತರ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಈ ಹೊಸ ಕ್ಯಾಂಪಸ್ ಬೋಯಿಂಗ್‍ನ ಎಂಜಿನಿಯರಿಂಗ್ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲದೆ, ಪ್ರಧಾನಮಂತ್ರಿಯ ‘ಆತ್ಮನಿರ್ಭರ್ ಭಾರತ'ದ ಅತ್ಯಂತ ಅತ್ಯಾಧುನಿಕ ಉದಾಹರಣೆಗಳಲ್ಲಿ ಒಂದಾಗಿದೆ. ಜೊತೆಗೆ, ಸುಕನ್ಯಾ ಕಾರ್ಯಕ್ರಮದ ಮೂಲಕ ಭಾರತೀಯ ಮಹಿಳೆಯರಿಗೆ ವಾಯುಯಾನದಲ್ಲಿ ಅವಕಾಶಗಳನ್ನು ಸೃಷ್ಟಿಸಲು ಬೋಯಿಂಗ್ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಅವರು ಹೇಳಿದರು.

ಬೋಯಿಂಗ್ ಮತ್ತು ಭಾರತದ ಸಹಭಾಗಿತ್ವವು ವಾಯುಯಾನದ ಭವಿಷ್ಯವನ್ನು ರೂಪಿಸುತ್ತದೆ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಧನಾತ್ಮಕ ಬದಲಾವಣೆಯನ್ನು ಮಾಡುತ್ತದೆ ಎಂದು ಸ್ಟೆಫನಿ ಪೋಪ್ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೋಯಿಂಗ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಸಲೀಲ್ ಗುಪ್ತೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News