ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿರುವುದು ಅಪ್ಪಟ ಸುಳ್ಳು: ಸಿಎಂ ಸಿದ್ದರಾಮಯ್ಯ

Update: 2024-04-30 14:42 GMT

ಗೋಕಾಕ್: ಸರಕಾರಿ ಅಧಿಕಾರಿಗಳಿಗೆ ಸಂಬಳ ಕೊಡಲು ದುಡ್ಡಿಲ್ಲ. ಕರ್ನಾಟಕ ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಅಪ್ಪಟ ಸುಳ್ಳು. ನಾವು ಸರಕಾರಿ ನೌಕರರ ಸಂಬಳವನ್ನು ಎಂದಿಗೂ ನಿಲ್ಲಿಸಿಲ್ಲ. ಅಭಿವೃದ್ಧಿ ಜೊತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಂಗಳವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಗೋಕಾಕ್‍ನಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಳ್ ಹೆಬ್ಬಾಳ್ಕರ್ ಪರವಾಗಿ ಆಯೋಜಿಸಲಾಗಿದ್ದ ಪ್ರಜಾಧ್ವನಿ-2 ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗ್ಯಾರಂಟಿಗಳಿಗೆ 52,009 ಕೋಟಿ ರೂ., ಹಾಗೂ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ನೀಡಲಾಗಿದೆ. ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಹಾಗೂ ಯುವನಿಧಿ ಗ್ಯಾರಂಟಿಗಳನ್ನು ಜನರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು ಎಂದು ಮುಖ್ಯಮಂತ್ರಿ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೂ. ರೈತ ಸಾಲ ಮನ್ನಾ ಮಾಡಿದ್ದಾರೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ 27.20 ಲಕ್ಷ ರೈತರ 8165 ಕೋಟಿ ರೂ.ಸಾಲ ಮನ್ನಾ ಮಾಡಿದ್ದೇನೆ. ಆದರೆ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಹೋರಾಟ ಮಾಡಿದರೆ, ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದು ರೈತರನ್ನು ಅವಮಾನಿಸಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಗಳನ್ನು ಪೂರ್ಣವಾಗಿ ಮನ್ನಾ ಮಾಡಲಾಗುವುದು. 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ಸಾಮಾಜಿಕ ನ್ಯಾಯ ತರಲು ದೇಶದಾದ್ಯಂತ ಜಾತಿ ಸಮೀಕ್ಷೆಯನ್ನು ಕೈಗೊಳ್ಳಲಾಗುವುದು. ಆದುದರಿಂದ, ಜನರಿಗೆ ಅನುಕೂಲ ಮಾಡಿಕೊಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೇ? ಅಥವಾ ಸುಳ್ಳು ಹೇಳುವ ಮೋದಿ ಅಧಿಕಾರಕ್ಕೆ ಬರಬೇಕೇ? ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಿ ಎಂದು ಜನರಿಗೆ ಮುಖ್ಯಮಂತ್ರಿ ಕರೆ ನೀಡಿದರು.

ನರೇಂದ್ರ ಮೋದಿ 10 ವರ್ಷಗಳಲ್ಲಿ ದೇಶದ ಭವಿಷ್ಯವನ್ನು ಬದಲಾವಣೆ ಮಾಡಲು ಪ್ರಯತ್ನ ಮಾಡಿದ್ದಾರೆಯೇ? ನುಡಿದಂತೆ ನಡೆದಿದ್ದಾರೆಯೇ? 2014ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆಯೇ? ಅಥವಾ ದೇಶದ ಜನರಿಗೆ ಸುಳ್ಳುಗಳನ್ನು ಹೇಳಿದ್ದಾರೆಯೇ ಎನ್ನುವುದನ್ನು ವಿಚಾರ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಡೀ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಆಹಾರ ಭದ್ರತಾ ಕಾಯ್ದೆ, ಉದ್ಯೋಗ ಖಾತ್ರಿ ಅಧಿನಿಯಮ, ಮಾಹಿತಿ ಹಕ್ಕು ಅಧಿನಿಯಮ, ಶಿಕ್ಷಣದ ಹಕ್ಕು ಇವುಗಳನ್ನು ಜಾರಿಗೆ ತಂದರು. ಸಾಮಾನ್ಯ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾನೂನುಗಳು ಇವು ಎಂದು ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಆಹಾರ ಭದ್ರತಾ ಕಾಯ್ದೆ ಇಲ್ಲದೇ ಹೋಗಿದ್ದರೆ ಬಡವರಿಗೆ ಉಚಿತ ಅಕ್ಕಿ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಜಾರಿ ಮಾಡಿದ್ದು ನರೇಂದ್ರ ಮೋದಿ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಮನಮೋಹನ್ ಸಿಂಗ್ ಸರಕಾರದ ಸಾಧನೆಯ ಶ್ರೇಯಸನ್ನು ತಾನು ಪಡೆಯಲು ನರೇಂದ್ರ ಮೋದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆ ಎಂದರು. 10 ವರ್ಷವಾದರೂ ಯಾರ ಖಾತೆಗೂ 15 ರೂ.ಕೂಡ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು, ನಿರುದ್ಯೋಗಿ ಯುವಕರು ಕೆಲಸ ಕೊಡಿ ಎಂದರೆ ಪಕೋಡ ಮಾರಿ ಎಂದು ಅತ್ಯಂತ ಬೇಜವಾಬ್ದಾರಿ ಉತ್ತರ ನೀಡಿದರು. ಇವರು ಪ್ರಧಾನಿಯಾಗಲು ಯೋಗ್ಯರೇ, ಇಲ್ಲವೋ ಎಂದು ವಿಚಾರ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

2022 ರೊಳಗೆ ರೈತರ ಆದಾಯವನ್ನು ಎರಡು ಪಟ್ಟು ಮಾಡುವುದಾಗಿ ಹೇಳಿದರು, ಆದರೆ ರೈತರ ಖರ್ಚು ಮೂರು ಪಟ್ಟು ಹೆಚ್ಚಾಯಿತೇ ಹೊರತು ಆದಾಯ ಹೆಚ್ಚಾಗಲಿಲ್ಲ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಯಿತು. ಅಚ್ಚೇ ದಿನ್ ಬರಲಿಲ್ಲ ಎಂದು ಅವರು ಟೀಕಿಸಿದರು.

ಮೊದಲು ಹಾಗೂ ಎರಡನೇ ಹಂತದ ಚುನಾವಣೆಗಳಲ್ಲಿ ಬಿಜೆಪಿ, ಎನ್‍ಡಿಎ ಅಧಿಕಾರಕ್ಕೆ ಬರುವುದಿಲ್ಲ. ತಮಗೆ ಸ್ಪಷ್ಟ ಸೋಲಾಗಿದೆ ಎನ್ನುವುದು ಖಚಿತವಾಗುತ್ತಿದ್ದಂತೆ ಮೋದಿ ಹತಾಶರಾಗಿದ್ದು, ಭಯಾನಕ ಸುಳ್ಳುಗಳಿಂದ ಜನತೆಯ ದಾರಿತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯೇತರರು ದಲಿತರ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ನೀಡಲಿದೆ ಎಂದು ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಎಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ಸಿದ್ದರಾಂಯ್ಯ ಹೇಳಿದರು.

ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ.ಎಂ.ಸಿ.ಸುಧಾಕರ್, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಸಂಗಮೇಶ್, ಪುಟ್ಟರಂಗ ಶೆಟ್ಟಿ, ಆಸಿಫ್ ಸೇಠ್, ನಯನಾ ಮೋಟಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ್ ನವಲಗಟ್ಟಿ, ಪಕ್ಷದ ಮುಖಂಡರಾದ ಡಾ.ಮಹಾಂತೇಶ್ ಕಡಾಡಿ, ಅಶೋಕ್ ಪೂಜಾರಿ, ಚಂದ್ರಶೇಖರ್ ಕೊಣ್ಣೂರು, ಸಿದ್ದಲಿಂಗ ದಳವಾಯಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News