ʼಬದುಕಿನ ಕುರಿತು ಹೊಸತನ್ನು ಹುಡುಕುವುದೇ ಕಾವ್ಯʼ: ದಸರಾ ಕವಿಗೋಷ್ಠಿ ಉದ್ಘಾಟಿಸಿದ ಕವಿ ಜಯಂತ್ ಕಾಯ್ಕಿಣಿ

Update: 2023-10-17 13:44 GMT

ಮೈಸೂರು,ಅ.17: ಕನ್ನಡದ ಕಾವ್ಯ ಕ್ಯಾನ್ವಾಸ್‌‍ ವಿಸ್ತಾರವಾಗಿ ಹರಡಿದೆ. ಜೀವನ ಧರ್ಮವಾದ ಕಾವ್ಯದಲ್ಲಿ ಪ್ರಜ್ಞಾ ಪ್ರವಾಹ ಇದೆ ಎಂದು ಕವಿ ಜಯಂತ್‌ ಕಾಯ್ಕಿಣಿ ಅಭಿಪ್ರಾಯಪಟ್ಟರು.

ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಮಂಗಳವಾರ 7 ದಿನಗಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನ ಕುರಿತು ಹೊಸತನ್ನು ಹುಡಕುವುದೇ ಕಾವ್ಯ. ಕವಿ ಅವ್ಯಕ್ತವನ್ನು ಉದ್ಘಾಟಿಸುತ್ತಾನೆ ಎಂದರು.

ನೆಟ್‌ವರ್ಕ್‌ ಇಲ್ಲದ ಸ್ಥಳದಲ್ಲಿ ಒಳ್ಳೆಯ ಕವಿತೆ ಮತ್ತು ಪ್ರೀತಿ ಸಿಗುತ್ತದೆ ಎಂದು ವಿಷಾದಿಸಿದ ಜಯಂತ್‌ ಕಾಯ್ಕಿಣಿ, ಗುಡ್‌ಮಾರ್ನಿಂಗ್‌, ಗುಡ್‌ನೈಟ್‌ಗೆ 100 ಕವಿತೆಗಳನ್ನು ಬರೆಯಲಾಗುತ್ತಿದೆ. ಎದುರಿಗೆ ಸಿಕ್ಕರೆ ನಗಲಾರದ ಕೃತಕವಾದ ಜೀವನ ಅನುಭವಿಸುತ್ತಿದ್ದೇವೆ ಎಂದು ನುಡಿದರು.

ʼಕಾವ್ಯವೇ ತಾಯಿʼ: ಕಾವ್ಯದಲ್ಲಿ ತಾಯಿ ಗುಣವಿದೆ. ಕಾವ್ಯವೇ ತಾಯಿ. ಸಂಕಟದಲ್ಲಿ ನಿರಾಶೆಯಲ್ಲಿ ಕಾವ್ಯ ಓದುವುದು ತಾಯಿಯಂತೆ ಸಂತೈಸುತ್ತದೆ. ಕತ್ತಲೆಯಿಂದ ಬೆಳೆಕಿನೆಡೆಗೆ ಕೊಂಡೊಯ್ಯುತ್ತದೆ ಎಂದು ಹಿರಿಯ ಕವಯತ್ರಿ ಮಾಲತಿ ಪಟ್ಟಣಶೆಟ್ಟಿ ನುಡಿದರು.

ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಕವಿ ಸಾಮಾಜಿಕ ಪ್ರಜ್ಞೆಯಿಂದ ದೂರವಾಗಬಾರದು. ಅತ್ಯಂತ ಕೆಳಸ್ತರದ ಜನಗಳ ಬಗ್ಗೆ ಮಾತಾಡಬೇಕು. ಸಂವಿಧಾನದ ಘೊಷಣೆಯಾದ ಭಾರತದ ಜನತೆಗಳಾದ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಅಜ್ಜಿಯೊಬ್ಬಳು ದೇಶಕ್ಕೆ ನೀನೇನು ಮಾಡಿದೆ ಎಂದು ದೇಶದ ಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರೂ ಗಡ್ಡ ಹಿಡಿದು ಕೇಳುವ, ಟೀ ಮಾರುವ ಹುಡುಗನೊಬ್ಬ ಪ್ರಧಾನಿಯಾಗುವ, ಕುರಿ ಕಾಯುವ ಹುಡುಗನೊಬ್ಬ ಮುಖ್ಯಮಂತ್ರಿಯಾದದ್ದು ಭಾರತದ ಸಂವಿಧಾನದಿಂದ. ಸಿದ್ದರಾಮಯ್ಯ ಅವರ ಶಕ್ತಿಯೋಜನೆಯಿಂದ ಮಹಿಳೆಯರು ಪ್ರಪಂಚ ನೋಡುವಂತಾಗಿದೆ ಎಂದು ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಸಮಾರಂಭ ಉದ್ಘಾಟಿಸಿದರು. ಶಾಸಕ ಕೆ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಕವಿಗೋಷ್ಠಿ ಉಪ ವಿಶೇಷಾಧಿಕಾರಿ ಡಾ.ದಾಸೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News