ಕಾಂಗ್ರೆಸ್ ಪಕ್ಷದಿಂದ ಒಡೆದು ಆಳುವ ನೀತಿ: ಬಿ.ವೈ.ವಿಜಯೇಂದ್ರ
ಬೆಂಗಳೂರು: ಬ್ರಿಟಿಷರು, ಕಾಂಗ್ರೆಸ್ ಪಕ್ಷಕ್ಕೆ ‘ಒಡಕನ್ನು ಮೂಡಿಸಿ ಆಡಳಿತ ನಡೆಸುವ ನೀತಿ’ಯನ್ನು ಕೊಟ್ಟು ಹೋಗಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ಸಿಗರು ಅದರ ದುರುಪಯೋಗವನ್ನು ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಶುಕ್ರವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ ಮಾತನಾಡಿದ ಅವರು, ಇದೊಂದು ಚಿಂತನ ಮಂಥನ ಕಾರ್ಯಕ್ರಮ. ನೆಹರೂ 17 ವರ್ಷ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಸೇರಿ ಕಾಂಗ್ರೆಸ್ ಪಕ್ಷವು 55- 60 ವರ್ಷ ದೇಶವನ್ನಾಳಿದೆ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನೆಹರೂ ಕುಟುಂಬದ ಹಾಗೂ ಕಾಂಗ್ರೆಸ್‍ನ ರಬ್ಬರ್ ಸ್ಟಾಂಪ್ ಆಗಿದ್ದರು ಎಂದು ಕಿಡಿಕಾರಿದರು.
400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷದ ಸಂಸದರ ಸ್ಥಾನ 44ಕ್ಕೆ ಇಳಿದಿದೆ. ಮತದಾರರು ಒಂದು ಬಾರಿ ಮೋಸ ಹೋಗಬಹುದು, ಎರಡು ಬಾರಿ ಮೋಸ ಹೋಗಬಹುದು. ಪದೇಪದೇ ಮೋಸ ಹೋಗುವುದಿಲ್ಲ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್‍ನ ಮೋಸಗಾರಿಕೆಯ ರಾಜಕಾರಣವನ್ನು ಪ್ರಜ್ಞಾವಂತ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ವಿಶ್ಲೇಷಿಸಿದರು.
ಬಿಜೆಪಿ ಕೇವಲ ಚುನಾವಣೆಗೆ ಸೀಮಿತವಾಗಿ ರಾಜಕಾರಣ ಮಾಡುವುದಿಲ್ಲ. ದಲಿತರಿಗೆ ನ್ಯಾಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ತಲುಪಿಸುವ ಮೋದಿ ಅವರ ಕನಸನ್ನು ನನಸು ಮಾಡಬೇಕು. ವಿಕಸಿತ ಭಾರತಕ್ಕಾಗಿ ಮೋದಿಜೀ ಅವರು ತಪಸ್ಸಿನ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ನುಡಿದರು.
50-60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ಸಿನಿಂದ ಕಾಂಗ್ರೆಸ್ ಮುಖಂಡರ ಗರೀಬಿ ಹಠಾವೋ ಆಗಿದೆ. ಜನರು ದಡ್ಡರಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯ. ಮತ್ತೆ ಜನರನ್ನು ಮೂರ್ಖರನ್ನಾಗಿ ಮಾಡಲು ಗ್ಯಾರಂಟಿಯ ಹುನ್ನಾರವನ್ನು ಅದು ಜನರ ಮುಂದಿಟ್ಟಿದೆ ಎಂದು ಟೀಕಿಸಿದರು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾಂಗ್ರೆಸ್ ದುರಾಡಳಿತದ ವಿರುದ್ಧ ಎಚ್ಚತ್ತು ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡಲು ಪ್ರಯತ್ನಿಸಬೇಕು ಎಂದು ವಿನಂತಿಸಿದರು.