ಸದನದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಬಿಜೆಪಿಯಲ್ಲಿ ಸಮನ್ವಯದ ಕೊರತೆ ಒಪ್ಪಿಕೊಂಡ ವಿಪಕ್ಷ ನಾಯಕ ಅಶೋಕ್

Update: 2023-12-08 11:01 GMT

ಆರ್‌ ಅಶೋಕ್‌ 

ಬೆಂಗಳೂರು: ವಿಧಾನಸಭೆಯಲ್ಲಿ ಹಿಂದಿನ ಸಾಲುಗಳಲ್ಲಿ ಕುಳಿತಿರುವ ತನ್ನ ಸದಸ್ಯರಿಗೆ ಪಕ್ಷದ ನಡೆಯ ಕುರಿತು ನಿರ್ಧಾರಗಳನ್ನು ತಿಳಿಸುವಲ್ಲಿ ಸಮನ್ವಯದ ಕೊರತೆ ಇರುವುದನ್ನು ಬಿಜೆಪಿ ಶಾಸಕಾಂಗ ಪಕ್ಷ ನಾಯಕ ಆರ್‌ ಅಶೋಕ್‌ ಒಪ್ಪಿಕೊಂಡಿದ್ದಾರೆ.

ಆಡಳಿತ ಪಕ್ಷದ ಎಂಎಲ್‌ಸಿ ಮತ್ತಾತನ ಬೆಂಬಲಿಗರಿಂದ ಬಿಜೆಪಿ ನಾಯಕರೊಬ್ಬರ ಮೇಲೆ ನಡೆದಿದೆ ಎನ್ನಲಾದ ದಾಳಿಯಲ್ಲಿ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್‌ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಗುರುವಾರ ಅಶೋಕ್‌ ಅವರು ಕೈಗೊಂಡ ನಿರ್ಧಾರವು ಬೇರೆ ಕಾರ್ಯತಂತ್ರ ರೂಪಿಸಲು ಬಯಸಿದ್ದ ಕೆಲ ಬಿಜೆಪಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲವರು ತಮ್ಮ ಈ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಕೆಲ ಇತರ ಶಾಸಕರು ಸದನದೊಳಗೆ ಪ್ರತಿಭಟನೆ ನಡೆಸಲು ಬಯಸಿದ್ದರಿಂದ ಸದನದಿಂದ ಹೊರನಡೆಯುವ ಅಶೋಕ್‌ ನಿರ್ಧಾರ ಅವರಿಗೆ ಅಚ್ಚರಿ ಮೂಡಿಸಿತ್ತು.

“ಗೊಂದಲದ ಬಗ್ಗೆ ಮಾಧ್ಯಮ ವರದಿಗಳು ಬಂದಿವೆ. ಪ್ರತಿಭಟನೆ ನಡೆಸುವುದೇ ಅಥವಾ ಹೊರನಡೆಯುವುದೇ ಎಂಬ ಕುರಿತು ಯೋಚಿಸಿದಾಗ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಪ್ರತಿಭಟನೆ ನಡೆಸಿದರೆ ಬರ ಮತ್ತಿತರ ವಿಚಾರಗಳ ಚರ್ಚೆ ಬಾಧಿತವಾಗುವುದರಿಂದ ಹೊರನಡೆಯುವುದು ಸೂಕ್ತ ಎಂದರು. ಎದುರಿನ ಸಾಲುಗಳಲ್ಲಿದ್ದ ಸಿ ಎನ್‌ ಅಶ್ವಥನಾರಾಯಣ, ಸಿ ಸಿ ಪಾಟೀಲ್‌, ಸುರೇಶ್‌ ಕುಮಾರ್‌ ಮತ್ತು ವಿಜಯೇಂದ್ರ ಅವರ ಜೊತೆಗೂ ಮಾತನಾಡಿ ಸದನದಿಂದ ಹೊರನಡೆಯಲಾಯಿತು. ಒಳ್ಳೆಯ ಉದ್ದೇಶದಿಂದ ಹೀಗೆ ಮಾಡಲಾಯಿತು, ಆದರೆ ಹಿಂದಿನ ಸಾಲುಗಳಲ್ಲಿದ್ದ ಶಾಸಕರಿಗೆ ಈ ವಿಚಾರ ತಲುಪಿಸುವಲ್ಲಿ ಸಂವಹನದ ಕೊರತೆಯಿತ್ತು. ಇದನ್ನು ಮುಂದೆ ಸರಿಪಡಿಸಲಾಗುವುದು,”ಎಂದು ಅಶೋಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News