"ಈ ಧೋರಣೆ ನೋಡಲು ನಾವು ಕಾಂಗ್ರೆಸ್ ಗೆ ಮತ ಹಾಕಬೇಕಿತ್ತೇ?"
ಬೆಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಮಹಿಳೆಯರ ವಿರುದ್ಧ ರವಿವಾರ ಮಂಡ್ಯದಲ್ಲಿ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆದರೆ ವಿಪರ್ಯಾಸವೆಂದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಯಾವುದೇ ಸಚಿವರು, ಪ್ರಮುಖ ನಾಯಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನ ವಹಿಸಿದ್ದಾರೆ. ಇದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರವಿವಾರ ಮಂಡ್ಯದಲ್ಲಿ ನಡೆದ ಹನುಮ ಶೋಭಾಯಾತ್ರೆಯಲ್ಲಿ ಮಾತನಾಡಿದ ಪ್ರಭಾಕರ್ ಭಟ್, "ಹಿಂದೆ ತಲಾಕ್ ತಲಾಕ್ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗ್ತಿದ್ದ. ನಿಮಗೆ ಪರ್ಮನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ತಲಾಕ್ ರದ್ದು ಮಾಡಿ ನಿಮಗೆ ಗೌರವ ಕೊಟ್ಟಿದ್ದು ಇದೇ ಹಿಂದೂ ಧರ್ಮ" ಎಂದು ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದ. ಇನ್ನೂ ಅನೇಕ ಪ್ರಚೋದನಕಾರಿ ಮಾತುಗಳನ್ನು ಅದೇ ಭಾಷಣದಲ್ಲಿ ಪ್ರಭಾಕರ್ ಭಟ್ ಹೇಳಿದ್ದ.
ಈ ಬಗ್ಗೆ ರಾಜ್ಯಾದ್ಯಂತ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸಾಹಿತಿಗಳು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ರಾಜ್ಯ ಸರಕಾರದ ಯಾವುದೇ ಸಚಿವರಾಗಲಿ, ಕಾಂಗ್ರೆಸ್ ನ ಹಿರಿಯ ಶಾಸಕರಾಗಲಿ, ಪಕ್ಷದ ಪ್ರಮುಖ ನಾಯಕರಾಗಲಿ - ಯಾರೂ ಈ ಬಗ್ಗೆ ಒಂದೇ ಒಂದು ಪ್ರತಿಕ್ರಿಯೆ ಕೊಟ್ಟಿಲ್ಲ. ಯಾವುದೇ ಹಿರಿಯ ಕಾಂಗ್ರೆಸ್ ಮುಖಂಡರು ಪ್ರಭಾಕರ್ ಭಟ್ ಹೇಳಿಕೆಯನ್ನು ಖಂಡಿಸಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ವಕ್ತಾರರು, ಎರಡನೇ, ಮೂರನೇ ಹಂತದ ನಾಯಕರು ಭಟ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದು ಬಿಟ್ಟರೆ ರಾಜ್ಯ ಕಾಂಗ್ರೆಸ್ ಸರಕಾರದ ಅಥವಾ ಪಕ್ಷದ ಯಾವೊಬ್ಬ ಹಿರಿಯ ಮುಖಂಡರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟೇ ಇಲ್ಲ.
ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆಗಳು ಈ ಬಗ್ಗೆ ಸಂಪೂರ್ಣ ಮೌನವಾಗಿವೆ. ಯಾವುದೇ ಹಿರಿಯ ಕಾಂಗ್ರೆಸ್ ನಾಯಕರ ಪತ್ರಿಕಾ ಹೇಳಿಕೆಗಳೂ ಇಲ್ಲ. ಗೃಹ ಸಚಿವರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
"ಈ ಬಾರಿ 90% ಮುಸ್ಲಿಮರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಈ ಧೋರಣೆ ನೋಡಲು ನಾವು ಕಾಂಗ್ರೆಸ್ ಗೆ ಮತ ಹಾಕಬೇಕಿತ್ತೇ" ಎಂಬಂತಹ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.
"ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕು ಎಂದು ನಾವು ಮತ ನೀಡಿ ಬೆಂಬಲಿಸಿದೆವು. ಆದರೆ ಇದು ತೀರಾ ನಿರಾಶೆ ತಂದಿರುವ ಸರಕಾರ" ಎಂಬಂತಹ ಸೋಷಿಯಲ್ ಮೀಡಿಯಾ ಪೋಸ್ಟ್ ಗಳು, ವಾಟ್ಸ್ ಆಪ್ ಸ್ಟೇಟಸ್ ಗಳು ಬರುತ್ತಿವೆ.
"ಈ ಸರಕಾರ ಮುಸ್ಲಿಮರ ವಿರುದ್ಧ ಯಾವುದೇ ಅನ್ಯಾಯ ಆದರೂ ಮೌನವಾಗಿರುತ್ತದೆ. ಲಿಂಗಾಯತರು, ಒಕ್ಕಲಿಗರಿಗೆ ಒಂದಿಷ್ಟು ಬೇಸರವಾದರೆ ಕೂಡಲೇ ಹೋಗಿ ಅವರನ್ನು ಓಲೈಸುತ್ತದೆ. ಮುಸ್ಲಿಮರ ಮತಗಳಿಗೆ ಬೆಲೆಯೇ ಇಲ್ಲದಂತಾಗಿದೆ" ಎಂಬ ಟೀಕೆ ವ್ಯಾಪಕವಾಗಿ ಕೇಳಿ ಬಂದಿದೆ.
"ಇಂತಹ ದುಷ್ಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೀನ ಮೇಷ ಎನಿಸುವುದು ಸಿದ್ದರಾಮಯ್ಯ ಸರಕಾರಕ್ಕೆ ಭೂಷಣವಲ್ಲ, ಅವರಿಂದ ಇದನ್ನು ನಿರೀಕ್ಷಿಸರಲಿಲ್ಲ" ಎಂದು ದೂರು ಕೇಳಿ ಬಂದಿದೆ.