ಪ್ರದೀಪ್ ಈಶ್ವರ್ ಎತ್ತಿರುವ ಪ್ರಶ್ನೆ ಸರಿಯಾಗಿಯೇ ಇದೆ: ಟ್ರೋಲ್ ವೀಡಿಯೊ ಹಂಚಿಕೊಂಡ ಶಾಸಕಿ ನಯನಾ ಮೋಟಮ್ಮ ಹೇಳಿದ್ದೇನು?
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗುರುವಾರ ವಿಧಾನಸಭೆಯಲ್ಲಿ ನೀಡಿದ್ದ ಒಂದು ಹೇಳಿಕೆಯಿಂದ ಭಾರೀ ಟ್ರೋಲ್ ಆಗುತ್ತಿದ್ದಾರೆ. ಮೇಜು ತಟ್ಟುವ ಮೂಲಕ ಅವರನ್ನು ಬೆಂಬಲಿಸಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೂಡ ಟ್ರೋಲ್‌ಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ವೀಡಿಯೊ ವೈರಲ್ ಆಗಿದೆ. ಈ ಬಗ್ಗೆ ಟ್ವೀಟ್ ಮೂಲಕ ನಯನಾ ಮೋಟಮ್ಮ ಸ್ಪಷ್ಟನೆ ನೀಡಿದ್ದಾರೆ.
ಟ್ರೋಲ್ ವೀಡಿಯೊ ಹಂಚಿಕೊಂಡಿರುವ ಶಾಸಕಿ, ''ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು. ಪ್ರದೀಪ್ ಈಶ್ವರ್ ಅವರು ಹೇಳಿರೋ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೆ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನೂ ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ'' ಎಂದು ಸ್ಪಷ್ಪಪಡಿಸಿದ್ದಾರೆ.
ಸದನದಲ್ಲಿ ಆಗಿದ್ದೇನು?
ವಿಧಾನಸಭಾ ಕಲಾಪದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದ ಕುರಿತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಈ ವೇಳೆ ಸ್ಪೀಕರ್ ಅವರ ಬಳಿ ಮಾತನಾಡಲು ಅವಕಾಶ ಕೇಳಿದ್ದ ಪ್ರದೀಪ್ ಈಶ್ವರ್, ಒಂದು ಸಾವು ಆಗಿದ್ದಕ್ಕೆ ಹೋರಾಟ ಮಾತನಾಡುತ್ತಿದ್ದಾರೆ ಅಲ್ವಾ? ಕೋವಿಡ್ ಸಮಯದಲ್ಲಿ ಸಾವಿರಾರು ಸಾವು ಆಯ್ತು ಅಲ್ಲವಾ? ಅದಕ್ಕೆ ನ್ಯಾಯ ಬೇಡ್ವಾ ಎಂದರು. ಈ ವೇಳೆ ಮಧ್ಯೆ ಪ್ರವೇಶಿಸಿ ಸ್ಪೀಕರ್ ಯು.ಟಿ.ಖಾದರ್, ಸಾವಾಗಿಲ್ಲ ಮಾರ್ರೆ ಎಂದು ತಡೆದರು. ಈ ವೀಡಿಯೋ ಭಾರೀ ಟ್ರೋಲ್‌ಗೆ ಒಳಗಾಗುತ್ತಿದೆ.