ಎಚ್‌ಡಿಕೆ ವಿರುದ್ಧ ʼಹಂದಿʼ ಪದ ಬಳಸಿದ ಎಡಿಜಿಪಿ ಚಂದ್ರಶೇಖರ್ ಬೆಲೆ ತೆರಬೇಕಾಗುತ್ತದೆ : ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ : "ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ‘ಹಂದಿ’ ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲೋಕಾಯುಕ್ತ ಎಡಿಜಿಪಿಗೆ ಏನಾದರೂ ಸರ್ವೀಸ್ ಕಂಡಕ್ಟ್ ರೂಲ್ ಬಗ್ಗೆ ಜ್ಞಾನವಿದ್ದರೆ ತಕ್ಷಣ ಕ್ಷಮಾಪಣೆ ಕೇಳಲಿ. ಒಬ್ಬ ಜನಪ್ರತಿನಿಧಿ, ಅದರಲ್ಲೂ ಕೇಂದ್ರ ಸಚಿವರ ಬಗ್ಗೆ ಹೀಗೆ ಅಸಭ್ಯ ಭಾಷೆಯಲ್ಲಿ, ಕೆಟ್ಟ ಪದ ಬಳಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕೇಡರ್ ಕಂಟ್ರೋಲ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಯಾವತ್ತೂ ಯಾರ ಬಗ್ಗೆಯೂ ಹೀಗೆ ಅಸಭ್ಯ ಭಾಷೆ ಬಳಸಿದವರಲ್ಲ. ಈ ಅಧಿಕಾರಿ ಬಗ್ಗೆಯೂ ಹಾಗೆಲ್ಲ ಏಕವಚನದಲ್ಲಿ ಮಾತನಾಡಿಲ್ಲ ಎಂದು ಹೇಳಿದ ಪ್ರಹ್ಲಾದ್ ಜೋಶಿ, ಎಡಿಜಿಪಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಕುಮಾರಸ್ವಾಮಿ ಬಗ್ಗೆ ಕೆಟ್ಟ ಪದ ಬಳಸಿರುವುದು ಆ ಅಧಿಕಾರಿಯ ಅಹಂಕಾರದ ಪರಮಾವಧಿಯಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರಕಾರದ ಆದೇಶವಿದ್ದರೆ ತನಿಖೆ ನಡೆಸಲಿ. ಕುಮಾರಸ್ವಾಮಿ ಆರೋಪ ಮಾಡಿದ್ದರೆ ಗೌರವಯುತ ಭಾಷೆಯಲ್ಲಿ, ಸಭ್ಯ ಪದಗಳಲ್ಲಿ ಸ್ಪಷ್ಟನೆ ಕೊಡಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಸಂಬೋಧಿಸುವುದು ಯಾವುದೇ ಅಧಿಕಾರಿಗಳಿಗೂ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.
ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ: ಒಬ್ಬ ಜನಪ್ರತಿನಿಧಿ ಬಗ್ಗೆ ಲೋಕಾಯುಕ್ತ ಎಡಿಜಿಪಿ ಕೆಟ್ಟ ಪದ ಬಳಸಿದ್ದು, ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದು ಕಾಂಗ್ರೆಸ್‍ಗೆ ಮುಳುವಾಗಲಿದೆ. ಕಾಂಗ್ರೆಸ್ ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆಯಲ್ಲ ಎಂದು ಅವರು ಕಿಡಿಕಾರಿದರು.