ಪ್ರಜ್ವಲ್ ಪ್ರಕರಣ | ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ : ಸಚಿವ ಚಲುವರಾಯಸ್ವಾಮಿ
ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಯಾವ ಪಾತ್ರವೂ ಇಲ್ಲ. ಆರೋಪಿ ಸ್ಥಾನದಲ್ಲಿರುವ ವಕೀಲ ದೇವರಾಜೇಗೌಡ ಈಗಾಗಲೇ ಬಂಧಿತನಾಗಿದ್ದು, ಅವರ ಮಾತುಗಳಿಗೆ ಮಾನ್ಯತೆ ಕೊಡುವ ಅಗತ್ಯವಿಲ್ಲ. ಅಲ್ಲದೆ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎನ್.ಚಲುವರಾಯಸ್ವಾಮಿ ಅವರ ಪಾತ್ರ ಕೂಡ ಇದೆ ಎಂದ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಎನ್.ಚಲುವರಾಯಸ್ವಾಮಿ ಪೋಸ್ಟ್ ನಲ್ಲಿ ಏನಿದೆ?
"ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಯಾವ ಪಾತ್ರವೂ ಇಲ್ಲದಿರುವುದರ ಬಗ್ಗೆ ಈ ಮೂಲಕ ಸ್ಪಷ್ಟ ಪಡಿಸುತ್ತೇನೆ. ಆರೋಪಿ ಸ್ಥಾನದಲ್ಲಿರುವ ವಕೀಲ ದೇವರಾಜೇಗೌಡ ಈಗಾಗಲೇ ಬಂಧಿತನಾಗಿದ್ದು, ವಕೀಲ ದೇವರಾಜೇಗೌಡ ರಾಜ್ಯದ ಜನರ ಗಮನ ಬೇರೆಡಗೆ ಸೆಳೆಯಲು ಹಾಗೂ ಬೇರೆಯವರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡಲು ನನ್ನ ಹಾಗೂ ನನ್ನ ಸಹೋದ್ಯೋಗಿ ಮಿತ್ರರಾದ ಡಿಕೆ ಶಿವಕುಮಾರ್, ಕೃಷ್ಣಭೈರೇಗೌಡ, ಪ್ರಯಾಂಕ್ ಖರ್ಗೆ ಅವರುಗಳ ಮೇಲು ಸಹ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದರು.
"ದೇವರಾಜೇಗೌಡ ಗೌಡ ಅವರ ಮಾತುಗಳಿಗೆ ಮಾನ್ಯತೆ ಕೊಡುವ ಅಗತ್ಯವಿಲ್ಲ. ಈಗಾಗಲೇ ನಾನು ದೇವರಾಜೇಗೌಡ ಅವರ ವಿರುದ್ಧ ಮಾನ ನಷ್ಟ ಮೊಕ್ಕದ್ದಮೆ ದಾಖಲಿಸಲು ನಿರ್ಧರಿಸಿರುವೆ. ಪ್ರಕರಣದ ಬಗ್ಗೆ ಎಸ್.ಐ.ಟಿ ತನಿಖೆ ನಡೆಸುತ್ತಿದ್ದು ಸತ್ಯಾಂಶ ಆದಷ್ಟು ಬೇಗ ಹೊರ ಬರಲಿದೆ" ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ದೇವರಾಜೇಗೌಡ ಆರೋಪ ಏನು?
ನಿನ್ನೆ(ಮೇ.17) ಹಾಸನದ ಕೋರ್ಟ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿ.ಕೆ.ಶಿವಕುಮಾರ್ ಅವರು ಕಾರ್ತಿಕ್ ನನ್ನು ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿಸಿದ್ದರು. ಅಲ್ಲದೆ, ಶಿವಕುಮಾರ್ ಅವರು ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದ್ದರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಇನ್ನೊಬ್ಬ ಸಚಿವರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು" ಎಂದು ಆರೋಪ ಮಾಡಿದ್ದರು.