ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ | ರಾಜ್ಯದ 16 ಕಡೆಗಳಲ್ಲಿ ಎನ್.ಐ.ಎ. ದಾಳಿ
ಹೊಸದಿಲ್ಲಿ : ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 16 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ಕೈಗೆತ್ತಿಕೊಂಡರು.
ಗುರುವಾರ ಬೆಳಗ್ಗೆ ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಕೇರಳದ ಎರ್ನಾಕುಲಂ ಮತ್ತು ತಮಿಳುನಾಡಿನ ಚೆನ್ನೈ ಸೇರಿದಂತೆ 16 ಕಡೆ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಜಪ್ತಿ ಮಾಡಿ, ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಂಡರು.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಒಂದು ಮನೆ ಹಾಗೂ ಬೆಳ್ತಂಗಡಿ, ಸುಳ್ಯ ಹಾಗೂ ಕೆಯ್ಯೂರು ಮೂಲದ ವ್ಯಕ್ತಿಗಳ ಮನೆಯಲ್ಲಿ ಎನ್‍ಐಎ ತನಿಖಾಧಿಕಾರಿಗಳ ತಂಡ ಶೋಧ ನಡೆಸಿತು. ಅದರಲ್ಲೂ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಮದ್ದಡ್ಕಕ್ಕೆ ಆಗಮಿಸಿದ ಎನ್‍ಐಎ ತಂಡ ಆರೋಪಿಗಾಗಿ ಹುಡುಕಾಟ ನಡೆಸಿತು ಎಂದು ಮೂಲಗಳು ತಿಳಿಸಿವೆ.
ಅದೇ ರೀತಿ, ಸೋಮವಾರಪೇಟೆ ತಾಲೂಕಿನಲ್ಲಿ ಇಬ್ಬರ ಮನೆ ಹಾಗೂ ಸುಂಟಿಕೊಪ್ಪದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆಸಿ ಮನೆ ಸದಸ್ಯರ ವಿಚಾರಣೆ ನಡೆಸಿದರು. ಇನ್ನೂ, ದಾಳಿ ವೇಳೆ ಯಾರನ್ನು ಬಂಧಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅನ್ನು 2022ರ ಜುಲೈ 26ರಂದು ದುಷ್ಕರ್ಮಿಗಳು ಹತ್ಯೆಗೈದಿದ್ದರು.ಪ್ರಕರಣದ ತನಿಖೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು. ಬಳಿಕ ತನಿಖೆಯನ್ನು ಎನ್‍ಐಎಗೆ ವಹಿಸಲಾಗಿತ್ತು.
ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ 20 ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿತ್ತು. 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸಿದ್ದಾರೆ.