ಸ್ವಾತಂತ್ರೋತ್ಸವಕ್ಕೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ

Update: 2023-08-13 18:42 GMT

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ವಾತಂತ್ರೋತ್ಸವ ಆಚರಣೆಗೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು, ಈ ಬಾರಿ 700 ಮಂದಿ ಶಾಲಾ ಮಕ್ಕಳಿಂದ ವೀರಭೂಮಿ, ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ ನಾಟಕ ಮೂಡಿಬರುತ್ತಿರುವುದು ವಿಶೇಷವಾಗಿದೆ.

ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಮೂರು ದಿನಗಳಿಂದ ತಾಲೀಮು ನಡೆಯುತ್ತಿದೆ. ಈ ಬಾರಿ ಬರೋಬ್ಬರಿ 8 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ.

ರವಿವಾರ ಬೆಳಗ್ಗೆ ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಹಾಗೂ ನಗರ ಜಿಲ್ಲಾಧಿಕಾರಿ ಸೇರಿದಂತೆ ಸೇನಾ ಪಡೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 38 ತುಕಡಿಗಳಿಂದ ಪಥಸಂಚಲನ ಹಾಗೂ ನಾಡಗೀತೆ, ರೈತಗೀತೆ ಹಾಗೂ ಮೋಟರ್ ಸೈಕಲ್ ಡಿಸ್ಟಲೇ ತಂಡದಿಂದ ಅಂತಿಮ ಹಂತದ ತಾಲೀಮು ನಡೆಯಿತು.

ಸಿದ್ಧತೆ ಕುರಿತು ಇಲ್ಲಿನ ಮಾಣಿಕ್ ಷಾ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆ.15ರ ಮಂಗಳವಾರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಪರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಸಾರ್ವಜನಿಕರಿಗಾಗಿ 3 ಸಾವಿರ ಆಸನಗಳು, ಅತಿಗಣ್ಯರಿಗೆ 2 ಸಾವಿರ ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 750 ಆಸನಗಳು, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ 2 ಸಾವಿರ ಆಸನಗಳು ಸೇರಿದಂತೆ ಒಟ್ಟು ಎಂಟು ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ‘ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ 108 ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣ, ಹೋಟೆಲ್‍ಗಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಾಹನ ನಿಲುಗಡೆಗೆ ನಾಲ್ಕು ಬಣ್ಣದ ಪಾಸ್‍ಗಳನ್ನು ಮಾಡಲಾಗಿದ್ದು, ಅವುಗಳಲ್ಲಿ ಯಾವ ದ್ವಾರದಿಂದ ಮೈದಾನಕ್ಕೆ ಬರಬೇಕು, ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ. ಮೈದಾನ ಸುತ್ತಮುತ್ತ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ, ಬೆಳಗ್ಗೆ 8 ರಿಂದ 11 ಗಂಟೆಯ ವರೆಗೂ ಕಬ್ಬನ್ ರಸ್ತೆಯ ಬಿಆರ್‍ವಿ ಜಂಕ್ಷನ್‍ನಿಂದ ಕಾಮರಾಜ ರಸ್ತೆಯ ಜಂಕ್ಷನ್‍ವರೆಗೂ ವಾಹನ ಸಂಚಾರ ನಿಷೇಧವಿರುತ್ತದೆ. ಪೊಲೀಸ್ ಸಿಬ್ಬಂದಿಗಳು ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಬಿ. ದಯಾನಂದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಹಿರಿಯ ಪೆÇಲೀಸ್ ಅಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ನಿಷೇಧಿರುವ ವಸ್ತುಗಳು..!: ‘ಹೆಲ್ಮೆಟ್, ಕರಪತ್ರಗಳು, ಎಲ್ಲ ವಿಧದ ಕ್ಯಾಮರಾಗಳು, ನೀರಿನ ಬಾಟಲ್, ಸಿಗರೇಟ್, ಬೆಂಕಿಪೊಟ್ಟಣ, ಶಸ್ತ್ರಾಸ್ತ್ರಗಳು ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮದ್ಯದ ಬಾಟಲ್, ಬಾವುಟಗಳು, ಪಟಾಕಿ ಮತ್ತು ಸ್ಪೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ನಗರ ಪೆÇಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು.

ವಾಹನ ನಿಲುಗಡೆ ನಿಷೇಧ:

-ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣದ ವರೆಗೆ.

-ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆ.ಆರ್.ರಸ್ತೆ.

-ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆಯ ವರೆಗೆ.

ಸಾಂಸ್ಕೃತಿಕ ಕಾರ್ಯಕ್ರಮ:

-ಶ್ರೀಪದ ದೇವರಾಜ್ ಮತ್ತು ತಂಡದಿಂದ ನಾಡಗೀತೆ ಮತ್ತು ರೈತಗೀತೆ

-750 ಶಾಲಾ ಮಕ್ಕಳಿಂದ ವೀರ ನಮನ

-700 ಶಾಲಾ ಮಕ್ಕಳಿಂದ ವೀರಭೂಮಿ, ವಿಧುರಾಶ್ವತ್ಥ ಧ್ವಜ ಸತ್ಯಾಗ್ರಹ ನಾಟಕ

-50 ಶಾಲಾ ಮಕ್ಕಳಿಂದ ರೋಪ್ ಸ್ಕಿಪಿಂಗ್

-ಕಲಾರಿಪಯಟ್ಟು

-ಟೆಂಟ್ ಪೆಸ್ಟಿಂಗ್

-ಮೋಟರ್ ಸೈಕಲ್ ಪ್ರದರ್ಶನ

ಬೆಂಗಳೂರು ನಗರದ ಎಲ್ಲ್ಲ ವಿಭಾಗಗಳಿಂದ 9-ಡಿಸಿಪಿ, 15-ಎಸಿಪಿ, 43-ಪಿಐ, 110-ಪಿಎಸ್‍ಐ, ಐಪಿಎಸ್‍ಐ, 72-ಎಎಸ್‍ಐ, 554-ಎಚ್‍ಸಿ,ಪಿಸಿ, 77-ಮಹಿಳಾ ಸಿಬ್ಬಂದಿಗಳೊಂದಿಗೆ 157-ಸಾದಾ ಉಡುಪಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು 54 ಜನ ಕ್ಯಾಮೆರಾ ಸಿಬ್ಬಂದಿಗಳನ್ನು ಬಂದೋಬಸ್ತ್ ಕಣಕ್ಕೆ ನಿಯೋಜಿಸಲಾಗಿದೆ.

ಸಂಚಾರ ನಿರ್ವಹಣೆಗಾಗಿ 3-ಡಿಸಿಪಿ, 6-ಎಸಿಪಿ, 22-ಪಿಐ, 31-ಪಿಎಸ್‍ಐ, 124-ಎಎಸ್‍ಐ, 507-ಎಚ್‍ಸಿ, ಪಿಸಿ. ಒಟ್ಟಾರೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಪ್ರಯುಕ್ತ ಒಟ್ಟು 1786 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಅಲ್ಲದೆ ಮೈದಾನದ ಬಂದೋಬಸ್ತ್ ಕರ್ತವ್ಯಕ್ಕೆ 10-ಕೆಎಸ್ರ್ಸಾಪಿ, ಸಿ.ಎ.ಆರ್. ತುಕಡಿಗಳನ್ನು, 2- ಅಗ್ನಿಶಾಮಕ ವಾಹನಗಳು, 2-ಆಂಬುಲೆನ್ಸ್ ವಾಹನಗಳು, 4-ಖಾಲಿ ವಾಹನಗಳು, 1-ಕ್ಷಿಪ್ರ ಕಾರ್ಯಾಚರಣೆ ಪಡೆ (ಕ್ಯೂಆರ್.ಟಿ) 1-ಡಿ-ಸ್ಪಾಟ್, 1-ಆರ್‍ಐವಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಂದು ಗರುಡ ಫೋರ್ಸ್, ಮೈದಾನದ ಸುತ್ತ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 100 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.








 



 



 




 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News