ಬಾನು ಮುಷ್ತಾಕ್ ಅವರ ಕೃತಿಯ ಅನುವಾದಕ್ಕೆ ಪ್ರತಿಷ್ಠಿತ 'ಇಂಗ್ಲಿಷ್ ಪೆನ್' ಪ್ರಶಸ್ತಿ

Update: 2024-07-18 15:11 GMT

ಬೆಂಗಳೂರು : ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ 'ಹಸೀನಾ ಮತ್ತು ಇತರ ಕತೆಗಳು' ಕಥಾ ಸಂಕಲನದ ಆಂಗ್ಲ ಅನುವಾದಕ್ಕೆ ಪ್ರತಿಷ್ಠಿತ 'ಇಂಗ್ಲಿಷ್ ಪೆನ್' ಪ್ರಶಸ್ತಿ ಪ್ರಕಟವಾಗಿದೆ. ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಬಸ್ತಿ ಅವರು ಈ ಕಥಾ ಸಂಕಲನವನ್ನು 'ಹಸೀನಾ ಅಂಡ್ ಅದರ್ ಸ್ಟೋರೀಸ್ ' ಎಂದು ಇಂಗ್ಲಿಷ್ ಗೆ ಅನುವಾದಿಸಿದ್ದರು. ಹತ್ತು ಭಾಷೆಗಳಿಂದ ಇಂಗ್ಲಿಷ್ ಗೆ ಅನುವಾದಗೊಂಡ ಒಟ್ಟು 16 ಕೃತಿಗಳಿಗೆ ಈ ಸಾಲಿನ ಪೆನ್ ಪ್ರಶಸ್ತಿ ಗುರುವಾರ ಪ್ರಕಟವಾಗಿದೆ. ಇದೇ ಮೊದಲ ಬಾರಿ ಕನ್ನಡದಿಂದ ಇಂಗ್ಲಿಷ್ ಗೆ ಅನುವಾದವಾದ ಕೃತಿಯೊಂದಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ ಎಂದು 'ಇಂಗ್ಲಿಷ್ ಪೆನ್' ಪ್ರಕಟಣೆ ತಿಳಿಸಿದೆ.

'ಇಂಗ್ಲಿಷ್ ಪೆನ್' ಜಗತ್ತಿನ ಪ್ರಸಿದ್ಧ ಮಾನವ ಹಕ್ಕು ಸಂಘಟನೆಗಳಲ್ಲಿ ಒಂದಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಜಾಗತಿಕವಾಗಿ ಶ್ರಮಿಸುತ್ತಿದೆ. ಮುಕ್ತವಾಗಿ ಓದುವ ಹಾಗು ಬರೆಯುವ ಹಕ್ಕಿಗಾಗಿ ಈ ಸಂಘಟನೆ ದುಡಿಯುತ್ತಿದೆ. 90 ದೇಶಗಳಲ್ಲಿ 130 ಕೇಂದ್ರಗಳಿರುವ ಪೆನ್ ಇಂಟರ್ ನ್ಯಾಷನಲ್ ಎಂಬ ಜಾಗತಿಕ ಲೇಖಕರ ಸಂಘವನ್ನು ಇದೇ 'ಇಂಗ್ಲಿಷ್ ಪೆನ್' ಸ್ಥಾಪಿಸಿದೆ.

ಸಮಕಾಲೀನ ಮಹಿಳೆಯರು ಎದುರಿಸುವ ವಾಸ್ತವಗಳನ್ನು ಅಪರೂಪದ ಪ್ರತಿಭೆ ಹಾಗು ಕಲೆಯ ಮೂಲಕ ಬಾನು ಮುಷ್ತಾಕ್ ಅವರು ಅನಾವರಣಗೊಳಿಸಿದ್ದಾರೆ. ಅವರ ಕೃತಿಯಲ್ಲಿನ ಧ್ವನಿ, ಸಂದರ್ಭಗಳು ಹಾಗು ಅನುಭವವನ್ನು ದೀಪಾ ಬಸ್ತಿ ಅವರ ಅತ್ಯುತ್ತಮ ಅನುವಾದ ಭಾರತ ಹಾಗು ಜಾಗತಿಕ ಇಂಗ್ಲಿಷ್ ಓದುಗರಿಗೆ ತಲುಪಿಸಿದೆ ಎಂದು ಪೆನ್ ಪ್ರಶಸ್ತಿ ಸಮಿತಿ ಹೇಳಿದೆ.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News