ಕಾಂಗ್ರೆಸ್ ಗ್ಯಾರಂಟಿಗಳ ಒತ್ತಡಕ್ಕೆ ಮಣಿದು ಸಿಲಿಂಡರ್ ಬೆಲೆ ಇಳಿಕೆ ಮಾಡಿದ ಪ್ರಧಾನಿ ಮೋದಿ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: "ನಾವು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಪರಿಹಾರ ಎಂದು 500 ರೂ ಸೇರಿಸಿ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಗ್ಯಾಸ್ ಸಿಲಿಂಡರ್ ಬೆಲೆಯನ್ನ 200 ರೂಪಾಯಿ ಕಡಿಮೆ ಮಾಡಿದ್ದಾರೆ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಉಚಿತ ಕೊಡುಗೆಯಿಂದ ದಿವಾಳಿಯಾಗಲಿದ್ದೇವೆ ಎಂದವರು ಏಕೆ ಮಧ್ಯಪ್ರದೇಶದಲ್ಲಿ 1,500 ಕೊಡುತ್ತಿದ್ದಾರೆ, 200 ರೂಪಾಯಿ ಸಿಲಿಂಡರ್ ಬೆಲೆ ಏಕೆ ಇಳಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮಹಿಳೆಯರು ಕಾಂಗ್ರೆಸ್‌ನವರು ಕೊಡುತ್ತಿದ್ದಾರೆ ನಿಮಗೆ ಏಕೆ ಆಗುತ್ತಿಲ್ಲ ಎಂದು ಬೈಯ್ಯುತ್ತಿದ್ದಾರೆ, ಅದಕ್ಕೆ ಬಿಜೆಪಿ ಸರ್ಕಾರ ಕರ್ನಾಟಕ ಮಾದರಿ ಅನುಸರಿಸುತ್ತಿದೆ. ಈ ದೇಶದ ಜನರಿಗೆ ಹಣ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ "ಕರ್ನಾಟಕ ಮಾದರಿ"ಯಿಂದ ಹೆದರಿಕೊಂಡಿದ್ದಾರೆ ಎಂಬುದು ಸತ್ಯʼʼ ಎಂದು ಹೇಳಿದರು.
ʼʼಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದ ಇಡೀ ದೇಶದ ಹೆಣ್ಣು ಮಕ್ಕಳು "ಕರ್ನಾಟಕ ಮಾದರಿ"ಗೆ ಮನಸೋತಿದ್ದಾರೆ. ನಾವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಾಂಗ್ರೆಸ್ ಪಕ್ಷದ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದೆ, ಜನರು ಸಂಭ್ರಮಿಸುತ್ತಿದ್ದಾರೆʼʼ ಎಂದು ತಿಳಿಸಿದರು.
ʼʼಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, "ಅದರಲ್ಲಿ ಇರುವುದನ್ನು ಒಂದೇ ಒಂದು ಸಾಬೀತು ಮಾಡಲಿ. ಅವರ ಕರ್ಮಕಾಂಡಗಳನ್ನು ಬಿಚ್ಚುವ ಕಾಲ ಹತ್ತಿರದಲ್ಲಿದೆ. ಚಾರ್ಜ್ ಶೀಟ್ ಎಂದರೆ ಏನು? ಅವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲʼʼ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ 10 - 15 ಪರ್ಸೆಂಟ್ ಕಮಿಷನ್ ಕೇಳಿದರು ಎಂದು ಗುತ್ತಿಗೆದಾರರಿಗೆ ಹೆದರಿಸಿ ಅವರ ಬಾಯಲ್ಲಿ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದರು. ಆನಂತರ ಅದೇ ಗುತ್ತಿಗೆದಾರರು ಪೊಲೀಸರ ಬಳಿ, ರಾಜ್ಯಪಾಲರ ಬಳಿ ನಾವು ಆರೋಪ ಮಾಡಿಲ್ಲ ಎಂದು ಸತ್ಯ ಹೇಳಿದರು" ಎಂದು ವಾಗ್ದಾಳಿ ನಡೆಸಿದರು.