ವಾಲ್ಮೀಕಿ ನಿಗಮದಲ್ಲಿ ಹಗರಣ | ಸಿಎಂ, ಡಿಸಿಎಂ ಹೆಸರು ಹೇಳುವಂತೆ ಆರೋಪಿಗಳಿಗೆ ಈಡಿಯಿಂದ ಒತ್ತಡ : ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

Update: 2024-07-18 13:11 GMT

ಐವರು ಸಚಿವರಿಂದ ಸುದ್ದಿಗೋಷ್ಠಿ

ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಈಗ ತೋರಿಸುತ್ತಿರುವ ಆಸಕ್ತಿ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಹಗರಣ ನಡೆದಾಗ ಯಾಕೆ ತೋರಿಲ್ಲ. ಹಿಂದಿನ ಸರಕಾರದಲ್ಲಿ ಎಪಿಎಂಸಿ, ಬೋವಿ ನಿಗಮ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಸ್ಟ್ ಟರ್ಮಿಲ್‌ನಲ್ಲಿ ಹಗರಣ ಆಗಿದೆ. ಅದರ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ದಿನೇಶ್​ ಗುಂಡೂರಾವ್​​, ಕೆಜೆ ಜಾರ್ಜ್, ಪ್ರಿಯಾಂಕ್​ ಖರ್ಗೆ, ಸಂತೋಷ್ ಲಾಡ್​​ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್​ ಖರ್ಗೆ ಅವರು,ಅರುಣಾಚಲ ಪ್ರದೇಶ, ಮಣಿಪುರ, ಉತ್ತಾರಖಂಡ, ಗೋವಾ, ಮಧ್ಯಪ್ರದೇಶ, ಅಸ್ಸಾಂ, ಗುಜರಾತ್‌ ನಲ್ಲಿ ಆಪರೇಷನ್ ಮಾಡಿ ರಾಜ್ಯ ಸರ್ಕಾರವನ್ನು ಬಿಜೆಪಿಗರು ಬೀಳಿಸಿದ್ದಾರೆ. ಇದು ಬಿಜೆಪಿ ಕಾರ್ಯತಂತ್ರದ ಭಾಗವಾಗಿದೆ. ರಾಜ್ಯದಲ್ಲಿ ಅವರದ್ದೇ ಸರ್ಕಾರದಿಂದ ಪಕ್ಷಕ್ಕೆ ಹಿನ್ನಡೆಯಾದರೆ ಕೇಂದ್ರ ಬಿಜೆಪಿ ಅವರ ಸಹಾಯಕ್ಕೆ ಬರುತ್ತದೆ ಎಂದು ಅಂಕಿ ಅಂಶಗಳ ಮೂಲಕ ವಿವರಿಸಿದರು.

444 ಶಾಸಕರನ್ನು ಖರೀದಿ ಮಾಡಲಾಗಿದೆ :

ದೇಶದಲ್ಲಿ ಈವರಗೆ ಅಂದರೆ 2014ರಿಂದ ಐಟಿ, ಈಡಿ, ಸಿಬಿಐ ಬಳಕೆ ಮಾಡಿ 444 ಶಾಸಕರನ್ನು ಖರೀದಿ ಮಾಡಲಾಗಿದೆ. ಬಹುಮತ ಇದ್ದರೂ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸರ್ಕಾರ ಪತನ ಮಾಡಲಾಗುತ್ತಿದೆ. ಬಿಜೆಪಿ ಸೇರಿದರೆ ಆರೋಪಿ ರಾಜಕೀಯ ನಾಯಕರು ಕಾನೂನು ಕುಣಿಕೆಯಿಂದ ಪಾರಾಗುತ್ತಾರೆ. 121 ರಾಜಕೀಯ ನಾಯಕರ ಮೇಲೆ ತನಿಖಾ ಸಂಸ್ಥೆಗಳು ದಾಳಿ ಮಾಡಿದ್ದು, ಈ ಪೈಕಿ 115 ವಿಪಕ್ಷಗಳ ಮೇಲೆ ದಾಳಿ ಮಾಡಲಾಗಿದೆ. 3 ಸಾವಿರ ಈಡಿ, ಐಟಿ, ಸಿಬಿಐ ದಾಳಿಗಳಾಗಿವೆ. ಅದರಲ್ಲಿ ಶೇ.25ರಷ್ಟು ಮಾತ್ರ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ.ಡಿ.ಯಿಂದ ಒತ್ತಡ :

ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಿಎಂ, ಡಿಸಿಎಂ ಹಾಗೂ ಸಚಿವರ ಹೆಸರು ಹೇಳಲು ಈ.ಡಿ.ಅಧಿಕಾರಿಗಳು ಆರೋಪಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬಿಎಸ್‌ವೈ ವಿರುದ್ಧದ ಈ.ಡಿ. ಪ್ರಕರಣದ ತನಿಖೆ ಏಕೆ ನಡೆಯುತ್ತಿಲ್ಲ ?

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲೆ ಐಟಿ, ಈಡಿ ಪ್ರಕರಣವಿದೆ. 2019ರಿಂದ ಇದುವರೆಗೆ ಯಡಿಯೂರಪ್ಪ ಮೇಲೆ ಯಾವುದೇ ವಿಚಾರಣೆ ಯಾಕೆ ನಡೆಯುತ್ತಿಲ್ಲ. ರೆಡ್ಡಿ ಸಹೋದರರ ಮೇಲೆ ಐಟಿ ಪ್ರಕರಣವಿತ್ತು. ಆದರೆ, ಈಗ ಅವರು ಪಕ್ಷ ಸೇರಿದ ಮೇಲೆ ಯಾವುದೂ ಇಲ್ಲ ಎನ್ನುತ್ತಾರೆ. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮೇಲೆ ಅಕ್ರಮ ಆಸ್ತಿ ಪ್ರಕರಣ ಇದೆ. ಈ ಕುರಿತು ಏಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ :"ಕೇಂದ್ರ ಸರ್ಕಾರ ಐಟಿ, ಈಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಪಕ್ಷಗಳ ಸರ್ಕಾರಗಳು ಇರುವ ರಾಜ್ಯಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದಕ್ಕೆ ವಿಪಕ್ಷಗಳನ್ನು ಟಾರ್ಗೆಟ್ ಮಾಡಲಾಗಿದೆ. ವಾಲ್ಮೀಕಿ ಹಗರಣ ಸಂಬಂಧ ವಿಚಾರಣೆ ವೇಳೆ ಬಲವಂತದ ಹೇಳಿಕೆ ಕೊಡಿಸಲಾಗಿದೆ. ಸರ್ಕಾರದ ಪ್ರಮುಖರ ಹೆಸರನ್ನು ಹೇಳುವಂತೆ ಬಲವಂತ ಮಾಡಲಾಗಿದೆ" 

-ಕಂದಾಯ ಸಚಿವ ಕೃಷ್ಣಭೈರೇಗೌಡ 

ಸರಕಾರ ಬೀಳಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ: ‘ವಾಲ್ಮೀಕಿ ನಿಗಮ ಅಕ್ರಮ ಕುರಿತ ಈ.ಡಿ. ತನಿಖೆ ರಾಜಕೀಯ ದುರುದ್ದೇಶದ ತನಿಖೆಯಾಗಿದೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಸಿದ್ದರಾಮಯ್ಯ ನಾಯಕತ್ವದಲ್ಲಿ ಬಹುಮತದಿಂದ ಸರಕಾರ ಬಂದಿದೆ. ಬಹುಶಃ ಸರಕಾರದ ಕಾರ್ಯಕ್ರಮಗಳನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಚುನಾಯಿತ ಸರಕಾರವನ್ನು ಬೀಳಿಸಲು ಕೇಂದ್ರ ಸರಕಾರವು ತನಿಖಾ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ. ಎಲ್ಲ ಪ್ರಕರಣಗಳಲ್ಲಿ ಈ.ಡಿ. ಅಧಿಕೃತವಾಗಿ ತನಿಖಾ ಪ್ರಕ್ರಿಯೆಯ ಅಂಶಗಳನ್ನೇಕೆ ಬಿಡುಗಡೆ ಮಾಡುತ್ತಿಲ್ಲ?’

-ಕೆ.ಜೆ.ಜಾರ್ಜ್, ಇಂಧನ ಸಚಿವ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News