ಹೆಚ್ಚುವರಿ ಅಧಿಕೃತ ಭಾಷೆಯಾಗಿ ‘ತುಳು’ | ಸ್ಪೀಕರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮುಂದಿನ ಕ್ರಮ : ಪ್ರಿಯಾಂಕ್ ಖರ್ಗೆ

Update: 2024-07-23 15:31 GMT

ಬೆಂಗಳೂರು : ತುಳು ಭಾಷೆಯ ಪ್ರಾಚೀನತೆ, ಇತಿಹಾಸ ಹಾಗೂ ಸೌಂದರ್ಯದ ಬಗ್ಗೆ ನಮಗೂ ಅಭಿಮಾನವಿದೆ. ಸರಕಾರ ಈ ವಿಚಾರದಲ್ಲಿ ಸಕಾರಾತ್ಮಕವಿದೆ. ಸ್ಪೀಕರ್ ನೀಡಿರುವ ಸಲಹೆಯಂತೆ ಅಧಿವೇಶನದ ಬಳಿಕ ಅವರ ಅಧ್ಯಕ್ಷತೆಯಲ್ಲೆ ಸಚಿವರು, ಶಾಸಕರು, ತುಳು ಅಕಾಡೆಮಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ನೀಲನಕ್ಷೆ ಕುರಿತು ಚರ್ಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ, ರಾಜ್ಯದಲ್ಲಿ ತುಳು ಭಾಷೆಯನ್ನು ರಾಜ್ಯದ ಎರಡನೆ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಗಮನ ಸೆಳೆದ ಸೂಚನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಪರವಾಗಿ ಅವರು ಉತ್ತರಿಸಿದರು.

ತುಳು ಭಾಷೆಯ ಕುರಿತು ಈಗಾಗಲೆ ಮೋಹನ್ ಆಳ್ವ ಸಮಿತಿಯ ವರದಿ ಸರಕಾರದ ಮುಂದಿದೆ. ಅದನ್ನು ಕಾನೂನು ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ಆಂಧ್ರಪ್ರದೇಶದಲ್ಲಿ ತೆಲುಗು ಜೊತೆಗೆ ಉರ್ದು, ಬಿಹಾರದಲ್ಲಿ ಬಿಹಾರಿ ಜೊತೆಗೆ ಹಿಂದಿ, ಪಶ್ಚಿಮ ಬಂಗಾಳದಲ್ಲಿ ಬಂಗಾಳಿ, ಬಿಹಾರಿ, ಉರ್ದು ಹೀಗೆ ಪ್ರಾದೇಶಿಕವಾರು ಮೂರು ಭಾಷೆಗಳನ್ನು ಅಧಿಕೃತವಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

ಅಶೋಕ್ ಕುಮಾರ್ ರೈ ಹೇಳಿರುವಂತೆ ಸಮಾಜದವರೆ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ರಾಜ್ಯಗಳಿಗೆ ಭೇಟಿ ನೀಡಿ, ಹೆಚ್ಚುವರಿ ಭಾಷೆಗಳ ಬಳಕೆ ಸಂಬಂಧ ಅಧ್ಯಯನ ನಡೆಸಿ, ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿದ್ದಾರೆ. ಸರಕಾರದ ವತಿಯಿಂದಲೂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕಲೆ ಹಾಕಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಅಶೋಕ್ ಕುಮಾರ್ ರೈ ಮಾತಿಗೆ ಬಿಜೆಪಿ ಸದಸ್ಯರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ ಸೇರಿದಂತೆ ಇನ್ನಿತರರು ದನಿಗೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News