ಬಿಜೆಪಿ ಕಚೇರಿ ರಾಜಭವನಕ್ಕೆ ಸ್ಥಳಾಂತರ : ಪ್ರಿಯಾಂಕ್ ಖರ್ಗೆ ಟೀಕೆ

Update: 2024-08-18 13:54 GMT

ಬೆಂಗಳೂರು : ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯೂ ಇದೀಗ ರಾಜಭವನಕ್ಕೆ ಸ್ಥಳಾಂತರ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯಾವ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಿದೆ, ನಾಯಕತ್ವ ದುರ್ಬಲವಾಗಿ ಇದೆಯೋ ಅಂತಹ ರಾಜ್ಯಗಳಲ್ಲಿ ಸಿಬಿಐ, ಇಡಿ, ಐಟಿ, ರಾಜ್ಯಪಾಲರನ್ನು ಬಳಕೆ ಮಾಡಲಾಗುತ್ತಿದೆ. ಐಟಿ, ಈಡಿ ಬಂದಾಗ ಬಿಜೆಪಿಗೆ ಬಹಳ ಖುಷಿಯಾಗುತ್ತದೆ ಎಂದು ಆರೋಪಿಸಿದರು.

ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡುವ ಸ್ಥಾನದಲ್ಲಿದ್ದಾರೆ. ನಿಮ್ಮಿಂದ ಅದು ಕಗ್ಗೊಲೆ ಆಗುವುದು ಬೇಡ. ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡಬೇಡಿ. ಬಿಜೆಪಿಯ ಕಾರ್ಯಕರ್ತರಾಗಬೇಡಿ. ನಿಮ್ಮಿಂದಲೇ ಸಂವಿಧಾನದ ಬಿಕ್ಕಟ್ಟು ತಲೆದೋರುವುದು ಬೇಡ. ಕಾಂಗ್ರೆಸ್ ಬಳಿ ಹೋರಾಟದ ರಕ್ತ ಇದೆ. ನಿಮ್ಮ ಬಳಿ ಪ್ರಧಾನಿ ಮೋದಿ, ಶಾ ಇದ್ದರೆ ನಮ್ಮ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಇದೆ. ರಾಜಭವನ ಕೇಸರೀಕರಣ ಆಗುವುದು ಬೇಡ ಎಂದು ಅವರು ಹೇಳಿದರು.

ಸಂಪುಟ ಸಭೆಯಲ್ಲಿ ಸಿಎಂ ಜೊತೆ ನಿಲ್ಲಲು ತೀರ್ಮಾನಿಸಿದ್ದೇವೆ. ರಾಜ್ಯಪಾಲರ ನಡೆಯನ್ನು ಖಂಡಿಸಿದ್ದೇವೆ. ನಮ್ಮ ಹಿಂದಿನ ಸಚಿವ ಸಂಪುಟದ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದಕ್ಕೆ ಖಂಡನೆ ಮಾಡಿದ್ದೇವೆ ಎಂದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸಂಬಂಧ ಸರಕಾರಿ ಅಧಿಕಾರಿಗೆ ಸಿಎಂ ಹೆಸರು ಹೇಳಬೇಕು ಎಂದು ಈಡಿ ಒತ್ತಡ ಹೇರುತ್ತದೆ. ಆ ಸರಕಾರ ಅಧಿಕಾರಿ ದೂರು ಕೊಡುತ್ತಾರೆ. ಬಳಿಕ ಬಿಜೆಪಿ ಸುಮ್ಮನಾಗುತ್ತದೆ ಎಂದು ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News