ಸಿಬಿಐ, ಈಡಿ ಕೇಂದ್ರ ಸರಕಾರದ ಕೈಗೊಂಬೆ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸಿಬಿಐ, ಈ.ಡಿ ಹಾಗೂ ಆದಾಯ ತೆರಿಗೆ ಇಲಾಖೆಗಳು ಕೇಂದ್ರ ಸರಕಾರದ ಕೈಗೊಂಬೆಗಳಾಗಿವೆ. ಎಲ್ಲೆಲ್ಲಿ ಬಿಜೆಪಿಯ ರಾಜ್ಯ ಘಟಕಗಳು ದುರ್ಬಲವಾಗಿವೆಯೋ, ಅಂತಹ ಕಡೆ ಸಿಬಿಐ, ಈ.ಡಿ, ಐಟಿಗಳನ್ನು ವಿಪಕ್ಷಗಳ ವಿರುದ್ಧ ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.
ಬುಧವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಜಾರ್ಖಂಡ್ ಗಳಲ್ಲಿ ಇದಾಗಿದೆ. ಈ.ಡಿಯನ್ನು ರಾಜಕೀಯ ಅಸ್ತ್ರವಾಗಿ ಕೇಂದ್ರ ಸರಕಾರ ಬಳಕೆ ಮಾಡುತ್ತಿದೆ. ಮುಡಾ ಪ್ರಕರಣದಲ್ಲಿ ಈ.ಡಿ ಹೇಗೆ ಪ್ರವೇಶ ಮಾಡಿತು ಎಂಬುದೇ ಗೊತ್ತಾಗುತ್ತಿಲ್ಲ. ಮನಿ ಲಾಂಡರಿಂಗ್(ಅಕ್ರಮ ಹಣ ವರ್ಗಾವಣೆ) ಇದ್ದರೆ ಈ.ಡಿ ಬರಬಹುದು. ಆದರೆ, ಈ.ಡಿ ತನಿಖೆಯನ್ನು ಯಾರೂ ಕೇಳದಿದ್ದರೂ, ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ 24 ಗಂಟೆಯೊಳಗೆ ಈ.ಡಿ ಪ್ರವೇಶ ಮಾಡಿತು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಈ.ಡಿ ಯವರು ಮಾಧ್ಯಮಗಳ ಮೂಲಕ ಇಂತಹ ಪತ್ರಗಳನ್ನು ದುರುದ್ದೇಶದಿಂದ ಸೋರಿಕೆ ಮಾಡುವ ಮೂಲಕ ಸಾರ್ವಜನಿಕವಾಗಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ(ಡಿ.5) ಹೈಕೋರ್ಟ್‍ನಲ್ಲಿ ವಿಚಾರಣೆ ಇದೆ. ಇವತ್ತು ಈ.ಡಿ.ಯವರು ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಲೋಕಾಯುಕ್ತಕ್ಕೆ ಬರೆದಿರುವ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಮುಡಾದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆಯಾಗಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ. ಆಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ನಿವೇಶನಗಳನ್ನು ಪ್ರಭಾವ ಬೀರಿ ಪಡೆದುಕೊಂಡಿದ್ದರೆ, ಈ ಪತ್ರದ ಪ್ರಕಾರ ಇದರಲ್ಲಿ ಬಸವರಾಜ ಬೊಮ್ಮಾಯಿ ಕೂಡ ಶಾಮೀಲಾಗಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.
ವಿಪಕ್ಷಗಳ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಬಹಿರಂಗಪಡಿಸುವ ಈ.ಡಿ., ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ವಿರುದ್ಧದ ಪ್ರಕರಣವನ್ನು ಮಾತ್ರ ಬಹಿರಂಗಪಡಿಸುವುದಿಲ್ಲ ಏಕೆ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ, ಮಹಾರಾಷ್ಟ್ರದ ಅಜಿತ್ ಪವಾರ್ ವಿರುದ್ಧದ ಪ್ರಕರಣಗಳೆಲ್ಲ ಎಲ್ಲಿ ಹೋಯಿತು? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಈ.ಡಿ 5906 ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಇದರಲ್ಲಿ ಕೇವಲ 31 ಪ್ರಕರಣಗಳು ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗಿವೆ. ರಾಜ್ಯದ ಬಿಜೆಪಿ ನಾಯಕರು ದಿಲ್ಲಿಗೆ ಹೋಗಿರೋದು ಅವರಲ್ಲಿನ ಭಿನ್ನಮತ ಸರಿಪಡಿಸಲು ಅಲ್ಲ, ಈ ಪತ್ರವನ್ನು ಸೋರಿಕೆ ಮಾಡಿಸಲು ಇರಬಹುದು. ವಿಷಯಾಂತರ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಅವರು ಟೀಕಿಸಿದರು.
ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ, ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ವಿಚಾರಣಾ ಆಯೋಗ ಮಧ್ಯಂತರ ವರದಿ ನೀಡಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಿರುವುದು ಹಾಗೂ ಬಿಜೆಪಿಯಲ್ಲಿನ ಗುಂಪುಗಾರಿಕೆ ವಿಚಾರದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಈ ಪತ್ರವನ್ನು ಸೋರಿಕೆ ಮಾಡಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.