Fact-Check | 'ಗೋಹತ್ಯೆಗೆ ಉತ್ತೇಜನ' ಎಂದು ಬಿಂಬಿಸಿ ಹಂಚಲಾಗುತ್ತಿರುವ ಪ್ರಿಯಾಂಕ್ ಖರ್ಗೆ ವಿಡಿಯೊ ತುಣುಕಿನ ಅಸಲಿಯತ್ತೇನು?

Update: 2023-06-27 08:58 GMT

ಬೆಂಗಳೂರು: ಗೋರಕ್ಷಣೆಗೆ ಪ್ರಯತ್ನಿಸುವವರನ್ನು ಬಂಧಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸರೊಂದಿಗೆ ನಡೆಸಿರುವ ಸಭೆಯಲ್ಲಿ ಸೂಚಿಸಿದ್ದಾರೆ ಎಂಬ ಪ್ರತಿಪಾದನೆಯುಳ್ಳ ವೀಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಿಂದೂ ವಿರೋಧಿ ನಿಲುವು ತಳೆದಿದ್ದು, ಇದು ಗೋಹತ್ಯೆಗೆ ನೀಡಿರುವ ಉತ್ತೇಜನವಾಗಿದೆ ಮತ್ತು ಸಚಿವರ ಆದೇಶವು ಕರ್ನಾಟಕದಲ್ಲಿನ ಅಘೋಷಿತ ತುರ್ತು ಪರಿಸ್ಥಿತಿಗೆ ನಿದರ್ಶನ ಎಂಬುದು ಈ ವಿಡಿಯೊ ತುಣುಕು ಹೊಂದಿರುವ ಪ್ರತಿಪಾದನೆಯಾಗಿದೆ. ಆದರೆ, ಈ ಪ್ರತಿಪಾದನೆ ಸಂಪೂರ್ಣ ಸುಳ್ಳು ಎಂದು altnews.in ಫ್ಯಾಕ್ಟ್ ಚೆಕ್‌ ವೇದಿಕೆ ಬಯಲು ಮಾಡಿದೆ.

ಕಲಬುರಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದ್ದ ಸಭೆಯಲ್ಲಿ, "ಈಗ ಬಕ್ರೀದ್ ಹಬ್ಬ ಬರುತ್ತಿದೆ. ಕಾನೂನಿನ ಪ್ರಕಾರ, ಎಲ್ಲ ಸಬ್ ಇನ್ಸ್‌ಪೆಕ್ಟರ್‌ಗಳ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿಗಳು ದಯವಿಟ್ಟು ಕೇಳಿಸಿಕೊಳ್ಳಿ.. ನಾವು ಆ ದಳದವರು, ಈ ದಳದವರು ಎಂದು ಗೋರಕ್ಷಣೆಯಲ್ಲಿ ತೊಡಗಿರುವವರಿಗೆ ರೈತರು ಎಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸಂಗತಿ ತಿಳಿದಿಲ್ಲ. ಯಾರಾದರೂ ಶಾಲು ಹೊದ್ದುಕೊಂಡು ನಾನು ಆ ದಳ ಅಥವಾ ಸಂಘಟನೆಯವನು ಎಂದು ಹೇಳಿಕೊಂಡು ಕಾನೂನನ್ನು ಕೈಗೆತ್ತಿಕೊಂಡರೆ ಅಂತವರನ್ನು ಒದ್ದು ಜೈಲಿಗಾಕಿ. ಕಾನೂನು ಸ್ಪಷ್ಟವಾಗಿದೆ. ನಗರ ಪ್ರದೇಶಗಳ ಮಿತಿಯಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಸಾಗಾಣಿಕೆಗೆ ಅಗತ್ಯವಾದ ದಾಖಲೆಗಳು ಹಾಗೂ ಅನುಮತಿ ಹೊಂದಿರುವವರಿಗೆ ಕಿರುಕುಳ ನೀಡಕೂಡದು ಎಂದು. ನೀವು ಅವರಿಗೆ (ಗೋರಕ್ಷಕರಿಗೆ) ನಿಮ್ಮ ಕೆಲಸ ವಹಿಸಿ ಪೊಲೀಸ್ ಠಾಣೆಗಳಲ್ಲಿ ಕೂರುತ್ತೀರಾ? ಈ ಹೊಸ ಬಗೆಯ ಕಿರುಕುಳ ಹಿಂದಿನ ಸರ್ಕಾರದ ಅವಧಿಯಲ್ಲಿ ಶುರುವಾಗಿದೆ. ಕಳೆದ ಬಾರಿ ಮನೆಗಳಿಗೆ ಭೇಟಿ ನೀಡಿದ್ದ ಈ ಮಂದಿ ರೈತರ ಪ್ರಾಣಿಗಳನ್ನು ಕೊಂಡೊಯ್ದಿದ್ದರು. ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಯಾರಾದರೂ ಜಾನುವಾರು ಇರಲಿ ಅಥವಾ ಇನ್ನಾವುದೇ ಪ್ರಾಣಿಗಳನ್ನಾಗಲಿ ಕಳ್ಳ ಸಾಗಣೆ ಮಾಡುತ್ತಿದ್ದರೆ ಅಂಥವರನ್ನು ಜೈಲಿಗಾಕಿ. ಅದಕ್ಕೆ ಯಾವುದೇ ಅಸಮ್ಮತಿ ಇಲ್ಲ. ಆದರೆ, ಎಲ್ಲ ಬಗೆಯ ಅನುಮತಿಗಳನ್ನು ಹೊಂದಿದ್ದೂ ಯಾರಾದರೂ ಕಿರುಕುಳಕ್ಕೊಳಗಾದರೆ, ಹಾಗೆ ಕಿರುಕುಳ ನೀಡುವ ಗೋರಕ್ಷಣೆಯ ಗೂಂಡಾಗಳನ್ನು ನೀವ್ಯಾರು ಎಂದು ಕೇಳಿ" ಎಂದು ಹೇಳಿದ್ದರು.

ಈ ಸಭೆಯ ವೀಡಿಯೊ ತುಣುಕೊಂದು ಮೊದಲಿಗೆ ಕನ್ನಡ ಸುದ್ದಿ ವಾಹಿನಿಯಾದ ಫಸ್ಟ್ ನ್ಯೂಸ್‌ನಲ್ಲಿ ಪ್ರಸಾರವಾಗಿತ್ತು. ಅದೇ ವೀಡಿಯೊ ತುಣುಕಿನ ಅವಧಿಯನ್ನು ಕೇವಲ 29 ಸೆಕೆಂಡುಗಳಿಗೆ ಕತ್ತರಿಸಿ, "ಪ್ರಿಯಾಂಕ್ ಖರ್ಗೆ ಅವರು ಹಿಂದೂ ವಿರೋಧಿ ಆದೇಶ ನೀಡಿದ್ದಾರೆ, ಗೋಹತ್ಯೆಗೆ ಉತ್ತೇಜನ ನೀಡಿದ್ದಾರೆ" ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಲಾಗುತ್ತಿದೆ. ಇದೇ ವಿಡಿಯೊ ತುಣುಕನ್ನು ರಾಜ್ಯ ಬಿಜೆಪಿಯು ತನ್ನ ಅಧಿಕೃತ @BJP4Karnataka ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ಕಾರಿತ್ತು. ಇದಲ್ಲದೆ ಆಂಧ್ರಪ್ರದೇಶದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಕೂಡಾ ತಮ್ಮ @VishnuReddy ಟ್ವಿಟರ್ ಖಾತೆಯಲ್ಲಿ ಇದೇ ಬಗೆಯ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದರು. ಇವರೊಂದಿಗೆ @MittaVamsiBJP, @Aish17aer ಮುಂತಾದ ಟ್ವಿಟರ್ ಬಳಕೆದಾರರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರೂ ಈ ಸುಳ್ಳು ಪ್ರತಿಪಾದನೆ ಇರುವ ವೀಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ.

ಆದರೆ, ಜೂನ್ 21ರಂದು 'ವಾರ್ತಾಭಾರತಿ' ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಿದ್ದ ಸಂಪೂರ್ಣ ವೀಡಿಯೊ ಅನ್ನು ನೋಡಿರುವ alt news, ಸಚಿವ ಪ್ರಿಯಾಂಕ್ ಖರ್ಗೆ ಅವರು 1) ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ. 2) ಕೋಮು ಉದ್ವಿಗ್ನತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಅಗತ್ಯತೆ ಹಾಗೂ 3) ಗೋರಕ್ಷಕರು ಎಂದು ಹೇಳಿಕೊಂಡು ಹಿಂಸಾಚಾರ ಹರಡಲು ಪ್ರಯತ್ನಿಸುವವರನ್ನು ಕೂಡಲೇ ಬಂಧಿಸಿ, ಶಿಕ್ಷೆ ವಿಧಿಸಬೇಕು ಎಂಬ ನಿರ್ದಿಷ್ಟ ಸೂಚನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿರುವುದು ಕಂಡು ಬಂದಿದೆ ಎಂದು ಹೇಳಿದೆ. 

Full View

ಪ್ರಿಯಾಂಕ್ ಖರ್ಗೆ ಅವರು ಪೊಲೀಸರೊಂದಿಗೆ ನಡೆಸಿರುವ ಸಭೆಯ ಸಂಪೂರ್ಣ ವೀಡಿಯೊದಲ್ಲಿನ 29 ಸೆಕೆಂಡುಗಳ ಅವಧಿಯ ತುಣುಕನ್ನು ಮಾತ್ರ ಕತ್ತರಿಸಿ ತಮಗೆ ಬೇಕಾದಂತೆ ಶೀರ್ಷಿಕೆ ಬರೆದು ಹಂಚಿರುವುದು ಕಂಡು ಬಂದಿದೆ. ಈ ಅವಧಿಯ ನಂತರವೂ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಹೇಳಿಕೆಗೆ ಮತ್ತಷ್ಟು ಆಯಾಮಗಳನ್ನು ಸೇರ್ಪಡೆ ಮಾಡಿದ್ದಾರೆ.

ಒಟ್ಟಾರೆಯಾಗಿ, ಸಚಿವ ಪ್ರಿಯಾಂಕ್ ಖರ್ಗೆ ಅವರು ಗೋರಕ್ಷಣೆ ಹಾಗೂ ಕೆಲವು ಸಂಘಟನೆಗಳ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರ ವಿರುದ್ಧ ಕಠಿಣ ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆಯೇ ಹೊರತು, ಗೋಹತ್ಯೆಗೆ ಉತ್ತೇಜನ ನೀಡುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು altnews.in ಫ್ಯಾಕ್ಟ್ ಚೆಕ್ ವೇದಿಕೆ ಬಯಲು ಮಾಡಿದೆ.

A lot of Right Wing trolls are seen sharing clipped video. Here's what Priyank Kharge said to Karnataka Police Cow Vigilante goons.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News