ಗುಜರಿ ಬಸ್ ಗಳನ್ನು ರಸ್ತೆಗಿಳಿಸದಂತೆ ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2023-12-28 07:56 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.28: ನಿಗದಿತ ಕಿಲೋ ಮೀಟರ್ ಗಳಷ್ಟು ಓಡಾಟ ನಡೆಸಿ ಸಂಚಾರ ಸಾಮರ್ಥ್ಯ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ಬಸ್ ಗಳನ್ನು ಗುಜರಿಗೆ ಹಾಕಬೇಕು. ಅಂತಹ ಬಸ್ ಗಳನ್ನು ಯಾವುದೇ ಕಾರಣಕ್ಕೂ ಪುನಃ ನಗರ, ಹಳ್ಳಿಗಳ ಮಾರ್ಗ ಅಥವಾ ಮತ್ತಾವುದೇ ಮಾರ್ಗಗಳಲ್ಲಿನ ಸಂಚಾರಕ್ಕೆ ಬಳಸಲು ಅನುಮತಿ ನೀಡಬಾರದು ಎಂದು ರಾಜ್ಯ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಗುಜರಿಗೆ ಸೇರಬೇಕಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ರಸ್ತೆಗಿಳಿಸಿದ್ದರಿಂದ 2006ರ ನವೆಂಬರ್ ನಲ್ಲಿ ಅಂಕೋಲಾದಲ್ಲಿ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಬಸ್ ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರತೀ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (RTO) ಸುಸ್ಥಿತಿ ದೃಢೀಕರಣ ಪತ್ರ (FC) ಪಡೆಯಬೇಕು. RTO ವತಿಯಿಂದ ದೃಢೀಕರಣ ಪತ್ರ ಪಡೆದ ಬಸ್ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು. ಕಾಲಕಾಲಕ್ಕೆ ಬಸ್ ಗಳನ್ನು ಪರಿಶೀಲಿಸಿ ರಿಪೇರಿ ಮಾಡಬೇಕು ಎಂದೂ ನ್ಯಾಯಪೀಠ ನಿರ್ದೇಶನಗಳನ್ನು ನೀಡಿದೆ.

ತೀರ್ಪಿನಲ್ಲಿ ವಿವರಿಸಲಾದ ನಿರ್ದೇಶನಗಳ ಕಟ್ಟುನಿಟ್ಟಾಗಿ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಪೀಠ ಅದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News