ಕುಮಾರಸ್ವಾಮಿ ಈರುಳ್ಳಿ, ಆಲೂಗಡ್ಡೆ ಬೆಳೆದಿಲ್ಲ, ಆಸ್ತಿ ಪಟ್ಟಿ ಶೀಘ್ರದಲ್ಲೇ ಬಹಿರಂಗ: ಡಿ.ಕೆ. ಶಿವಕುಮಾರ್

Update: 2024-08-04 15:31 GMT

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ರೂ.ಸಂಪಾದನೆ ಮಾಡಿಲ್ಲ. ಶೀಘ್ರದಲ್ಲಿಯೇ ಅವರ ಆಸ್ತಿ ಪಟ್ಟಿ ಬಿಡುಗಡೆಗೊಳಿಸುವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರವಿವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ಎಂದು ವಾಗ್ದಾಳಿ ನಡೆಸಿದರು.

ನಿನ್ನ ಸಹೋದರ ಬಾಲಕೃಷ್ಣ ಗೌಡ ಅವರ ಕುಟುಂಬ ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ನೀವು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ. ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಅದು ಸಂಪಾದನೆ ಆಗಿದೆ ಲೆಕ್ಕ ಕೊಡಬೇಕು ಎಂದು ಸವಾಲೆಸೆದರು.

ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ ಎಂದ ಅವರು, ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಬಿಡುಗಡೆ ಮಾಡಿಲ್ಲ. ಆದರೆ, ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಅವರು ಹೇಳಿದರು.

ನೀವು ರೈತನ ಮಗ ಎಂದು ಹೇಳುತ್ತೀರಿ. ಆದರೆ, ನಮ್ಮ ಹಳ್ಳಿ ಕಡೆ ಒಂದು ಮಾತು ಹೇಳುತ್ತಾರೆ. ‘ಹುಟ್ಟಿದವೆಲ್ಲಾ ಬಸವ ಆಗುವುದಿಲ್ಲ’ ಎಂದು. ಅಂದರೆ ಹಳ್ಳಿಗಳಲ್ಲಿ ಹುಟ್ಟುವ ಎಲ್ಲ ಕರುಗಳು ಬಸವ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ರೈತರು ರೈತರ ಮಕ್ಕಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷಕ್ಕೆ 136 ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ 19 ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿಟಿ ದೇವೆಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ಶಿವಕುಮಾರ್ ನ್ಯಾಯುತವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ವಿಚಾರವನ್ನು ಹಾದಿಬೀದಿಯಲ್ಲಿ ಚರ್ಚೆ ಮಾಡುವುದಲ್ಲ. ಮುಖ್ಯವಾದ ವೇದಿಕೆಗಳಲ್ಲಿ ಚರ್ಚೆ ಮಾಡಬೇಕು. ಈ ವಿಚಾರವಾಗಿ ನಾವು ಮಾಡುವ ಚರ್ಚೆ ದಾಖಲೆಯಾಗಿ ಉಳಿಯಬೇಕು. ಅದಕ್ಕಾಗಿಯೇ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡುತ್ತಿದ್ದೇನೆ. ಎರಡು ಬಾರಿ ಆಹ್ವಾನ ನೀಡಿದೆ. ಅವರು ಬರಲಿಲ್ಲ ಎಂದರು.

ಅದು ಅಲ್ಲದೆ, ಈಗ ಅವರ ಸಹೋದರ ಹಾಗೂ ಅವರ ಪಕ್ಷದ ಶಾಸಕರು ಸದನದಲ್ಲಿ ಇದ್ದಾರೆ. ಅವರ ಬಳಿ ದಾಖಲೆಗಳನ್ನು ಕೊಟ್ಟು ಕಳಿಸಿ ಚರ್ಚೆ ಮಾಡಿಸಲಿ. ಇದ್ದೆಲ್ಲವೂ ಮುಂದಿನ ಪೀಳಿಗೆಗಳಿಗೂ ತಿಳಿಯಲಿ. ಸಾರ್ವಜನಿಕವಾಗಿ ಚರ್ಚೆ ಮಾಡಬೇಕೆಂದರೆ ಯಾವುದಾದರೂ ಸುದ್ದಿ ವಾಹಿನಿಯಲ್ಲಿ ಕೂತು ಚರ್ಚೆ ಮಾಡಬೇಕು. ಅವರ ಜತೆ ಚರ್ಚೆ ಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.

ಸಭೆಯಲ್ಲಿ ಗೃಹ ಸಚಿವ ಡಾ.ಜಿಪರಮೇಶ್ವರ್, ಸಚಿವರಾ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಝಮೀರ್ ಅಹ್ಮದ್ ಖಾನ್, ಸಂತೋಷ್ ಲಾಡ್, ಮಾಂಕಾಳ ವೈದ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ, ಮಾಜಿ ಸಂಸದ ಡಿ.ಕೆ ಸುರೇಶ್, ಸೌಮ್ಯ ರೆಡ್ಡಿ, ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News