ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿಯಿಂದ ಧರಣಿ

Update: 2024-09-26 14:42 GMT

ಬೆಂಗಳೂರು: ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರಾಗಬೇಕೆಂದು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯನವರು ಸಿಎಂ ರಾಜೀನಾಮೆ ನೀಡದಿದ್ದರೆ ಆ ಪಕ್ಷದಲ್ಲೇ ಅನೇಕರು ದಂಗೆ ಏಳಲಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದು ಹೇಳಿದರು.

ಕೋರ್ಟ್ ತೀರ್ಪಿನ ಬಳಿಕವೂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ. ಬಿಎಸ್‍ವೈ ಮೇಲೆ ಆರೋಪ ಬಂದಾಗ ಇವರೇ ರಾಜೀನಾಮೆಗೆ ಒತ್ತಾಯಿಸಿದ್ದರು. ತನಿಖೆಗೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು. ಹಾಗೆಯೇ ಈಗ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ. ಈಶ್ವರಪ್ಪ ಮೇಲೆ ಆರೋಪ ಬಂದಾಗಲೂ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಸಚಿವರಾಗಿದ್ದ ಬಿ.ನಾಗೇಂದ್ರ ಮೇಲೆ ಆರೋಪ ಬಂದು ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಮಾತ್ರ ರಾಜೀನಾಮೆ ನೀಡುತ್ತಿಲ್ಲ ಎಂದು ಅವರು ದೂರಿದರು.

ವಾಲ್ಮೀಕಿ ನಿಗಮದಲ್ಲಿ ಹಣ ದುರ್ಬಳಕೆಯಾಗಿದೆ ಎಂದು ಸರಕಾರ ಒಪ್ಪಿಕೊಂಡಿದೆ. ಅಭಿವೃದ್ಧಿಗೆ ಕಾಸಿಲ್ಲ. ಆದರೆ, ಲೂಟಿಗೆ ಮಾತ್ರ ಹಣ ದೊರೆಯುತ್ತಿದೆ. ನ್ಯಾ.ಸಂತೋಷ್ ಹೆಗ್ಡೆಯವರು ಈ ಹಿಂದೆ ಬಿಎಸ್‍ವೈ ರಾಜೀನಾಮೆ ಕೇಳಿದ್ದರು. ಈಗ ಸಿದ್ದರಾಮಯ್ಯರ ರಾಜೀನಾಮೆ ಕೇಳಿದ್ದಾರೆ. ಎಲ್ಲರ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಮನ್ನಣೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್‍ನಲ್ಲಿ ಸಿಎಂ ಆಗಲು ಅನೇಕರು ಕಾಯುತ್ತಿದ್ದಾರೆ. ಸಂಸತ್‍ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಂವಿಧಾನದ ಪುಸ್ತಕ ಹಿಡಿದು ಓಡಾಡಿದ್ದಾರೆ. ಅವರೆಲ್ಲರೂ ಈಗ ಮೌನಕ್ಕೆ ಜಾರಿದ್ದಾರೆ. ದೇಶವನ್ನು 50ವರ್ಷ ಕಾಲ ಕಾಂಗ್ರೆಸ್ ಲೂಟಿ ಮಾಡಿದೆ. ಕ್ಲೀನ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಕ್ಲೀನ್ ಆಗಲಿ ಎಂದರು.

‘ಇದು ರಾಜಕೀಯ ಪ್ರೇರಿತವಾಗಿದ್ದರೆ ಕೋರ್ಟ್‍ಗಳು ಏಕೆ ತೀರ್ಪು ನೀಡುತ್ತಿದ್ದವು? ಈ ರೀತಿ ಕಾಂಗ್ರೆಸ್ ಆರೋಪ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಮೊದಲಿಂದಲೂ ಸಮಸ್ಯೆ ಇದೆ. ಅನೇಕ ಬಾರಿ ಭಿನ್ನಮತ ಉಂಟಾಗಿದೆ. ಯಾರು ಸಿಎಂ ಆಗಬೇಕೆಂದು ಚರ್ಚೆ ಕಾಂಗ್ರೆಸ್‍ನೊಳಗೆ ನಡೆಯುತ್ತಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ ಎಂದರು.

ಯತ್ನಾಳ್ ಗೈರು: ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಬಸವಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸಹಿತ ಹಲವು ನಾಯಕರು ಗೈರು ಹಾಜರಾಗಿದ್ದರು. ಈ ಮಧ್ಯೆ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ಪ್ರತ್ಯೇಕ ಸಭೆ ನಡೆಸಿದ್ದಾರೆಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News