ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಒದ್ದು ಒಳಗೆ ಹಾಕುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
ಕಲಬುರಗಿ: ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ʼʼಬಿಜೆಪಿ ಚಿತ್ತಾಪುರದಲ್ಲಿ ಅಷ್ಟೇ ಅಲ್ಲ ರಾಜ್ಯದಲ್ಲಿಯೂ ಬೆಳೆಯಬಾರದುʼʼ ಎಂದು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದ ಅವರು, ʼʼಈಗ ರಾಜ್ಯದಲ್ಲಿರುವುದು ಬಿಜೆಪಿ ಸರಕಾರ ಅಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾದ ಇದೆ ಇಲ್ಲಿ. ಪ್ರಚೋದನಾಕಾರಿ ಭಾಷಣ ಮಾಡುವವರನ್ನು ಒಳಗೆ ಹಾಕುತ್ತೇವೆ. ಸಂವಿಧಾನ ಉಲ್ಲಂಘನೆ ಮಾಡಿದವರಿಗೆ ಜೈಲೂಟ ಖಚಿತʼʼ ಎಂದು ಎಚ್ಚರಿಕೆ ನೀಡಿದರು.
ʼʼಶಾಸಕ ಎನ್. ರವಿಕುಮಾರ್ ಅವರು ಜೇವರ್ಗಿಯಲ್ಲಿ ತಮ್ಮ ಪಕ್ಷದ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಸ್ವತಃ ಅವರ ಪಕ್ಷದವರೇ ಹೇಳುತ್ತಿದ್ದರು. ಅದಾದ ಮೇಲೆ ಅವರು ಕಲಬುರಗಿಗೆ ಬಂದೇ ಇರಲಿಲ್ಲ. ಆದರೆ ನಿನ್ನೆ ಚಿತ್ತಾಪುರಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರ ಶಿಷ್ಯ ಮಣಿಕಂಠ ರಾಠೋಡ್ ಗೆ ಗಡಿಪಾರು ಶಿಕ್ಷೆ ವಿಧಿಸಿದಾಗ ರವಿಕುಮಾರ ಯಾಕೆ ಬಂದು ಪ್ರತಿಭಟನೆ ಮಾಡಲಿಲ್ಲ?, ಇದು ಬಿಜೆಪಿ ಸರಕಾರದ ಕಲಬುರಗಿ ಅಲ್ಲ, ಕಾಂಗ್ರೆಸ್ ಸರಕಾರದ ಕಲಬುರಗಿ. ನಿಮ್ಮ ಶಿಷ್ಯ ಅಷ್ಟೇ ಅಲ್ಲ, ನೀವು ತಪ್ಪು ಮಾಡಿದರೂ ಕೂಡಾ ನಿಮ್ಮ ಮೇಲೂ ಕಾನೂನು ಕ್ರಮ ಆಗುತ್ತದೆ " ಎಂದು ಎಚ್ಚರಿಸಿದರು.
ʼʼಬಿಜೆಪಿ ಸರ್ಕಾರ ಇದ್ದಾಗ ಅಕ್ಕಿ ಹಾಗೂ ಹಾಲಿನಪುಡಿ ಕಳ್ಳತನ ಮಾಡಿರುವ ಆರೋಪ ಹೊತ್ತಿರುವವರಿಗೆ ಮಣಿಕಂಠ ರಾಠೋಡ್ ಗೆ ಟಿಕೆಟ್ ನೀಡಲಾಗಿತ್ತು. ಆದರೆ,ನಮ್ಮ ಸರ್ಕಾರ ಬಂದ ಮೇಲೆ ಅಂತವರನ್ನ ಜೈಲಿಗೆ ಕಳಿಸಲಾಗಿದೆ ಅಥವಾ ಅಂತವರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆʼʼ ಎಂದು ಖರ್ಗೆ ಟೀಕಿಸಿದರು.
ಆಂದೋಲಾ ಸಿದ್ದಲಿಂಗ ಸ್ವಾಮೀಜಿ ವಿರುದ್ದ ಹರಿಹಾಯ್ದ ಸಚಿವರು, " ನಿಮ್ಮದು ಎಂತಹ ತತ್ವ ? ಅಕ್ಕಿ ಕಳ್ಳರಿಗೆ, ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡುವವರ ರಕ್ಷಣೆ ಮಾಡಿ ಅಂತ ನಿಮ್ಮ ತತ್ವ ಹೇಳುತ್ತಾ" ? ಎಂದು ತೀಕ್ಷಣವಾಗಿ ಪ್ರಶ್ನಿಸಿದರು.
ʼʼಬಿಜೆಪಿಯವರಿಗೆ ಬಹುಶಃ ಏನು ಮಾಡಬೇಕು ಎನ್ನುವುದೇ ಅರ್ಥ ಆಗುತ್ತಿಲ್ಲ. ಅವರು ಅಧಿಕಾರ ಕಳೆದುಕೊಂಡು ನೂರು ದಿನ ಆಗಿದೆ. ಆದರೆ, ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದೇವೆ. ಚಂದ್ರಯಾನ ಚಂದ್ರನಿಗೆ ಮುಟ್ಟಿದೆ. ಆದರೆ ವಿರೋಧ ಪಕ್ಷದ ನಾಯಕ ಯಾರು ಎಂದು ಅದು ಬಿಜೆಪಿಗರಿಗೆ ಗೊತ್ತಾಗುತ್ತಿಲ್ಲ. ಅವರ ಪಕ್ಷದಲ್ಲಿ ಏನು ಆಗುತ್ತಿದೆ ಎಂದು ಅವರಿಗೆ ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ʼʼಒಳ್ಳೆಯ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದ ಸಚಿವರು ಬಿಜೆಪಿಯವರು ಹತಾಶರಾಗಿದ್ದಾರೆ. ಅಧಿಕಾರ ಇಲ್ಲದೇ ಇರುವುದಕ್ಕೆ ನೀರಿನಿಂದ ಹೊರಬಿದ್ದ ಮೀನಿನಂತೆ ಬಿಜೆಪಿಯವರು ಚಡಪಡಿಸುತ್ತಿದ್ದಾರೆ. ಮೊನ್ನೆ ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಹಿಂದೆ ಬಂಧಿ ಆಗಿ ಕನ್ನಡಿಗರ ಮಾರ್ಯಾದೆ ಬೀದಿಗೆ ತಂದಿದ್ದರುʼʼ ಎಂದರು.