ಸೆ.22ಕ್ಕೆ ರಾಜ್ಯದ 164 ಕೇಂದ್ರಗಳಲ್ಲಿ ಪಿಎಸ್‍ಐ ಪರೀಕ್ಷೆ ನಡೆಸಲು ಸಿದ್ಧತೆ
ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್‍ಐ) ಪರೀಕ್ಷೆ ಸೆ.22ರಂದು ಬೆಂಗಳೂರು, ಧಾರವಾಡ, ಕಲಬುರಗಿ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳ 164 ಕೇಂದ್ರಗಳಲ್ಲಿ ನಡೆಯಲಿದ್ದು, 66,990 ಮಂದಿ ಪರೀಕ್ಷೆಗೆ ಅರ್ಹರಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿಯನ್ನು ನೀಡಿದೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು, ಪಿಎಸ್‍ಐ ಪರೀಕ್ಷೆ ಬರೆಯುವ ಹಿನ್ನೆಲೆ ದೈಹಿಕ ಪರೀಕ್ಷೆಗೆ ಬಂದಿರುವ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಬೆರಳಚ್ಚು ಪಡೆದಿದ್ದು, ಅದರ ಆಧಾರದ ಮೇಲೆ ನಾವು ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಲಾಗುವುದು ಎಂದರು.
ಜತೆಗೆ ಪರೀಕ್ಷೆ ಪ್ರಾರಂಭವಾಗುವ 30 ನಿಮಿಷದ ಒಳಗೆ ಅಭ್ಯರ್ಥಿಗಳ ದೃಢೀಕರಣಕ್ಕಾಗಿ ಮತ್ತೊಮ್ಮೆ ಬೆರಳಚ್ಚು ಮತ್ತು ಭಾವಚಿತ್ರವನ್ನು ಎಐ ತಂತ್ರಜ್ಞಾನದ ಮೂಲಕ ಪರಿಶೀಲಿಸಿ, ಪರೀಕ್ಷೆ ಬರೆಯಲು ಸೂಚಿಸುವಂತೆ ಕಟ್ಟುನಿಟ್ಟಿನ ಕ್ರಮವಹಿಸಿದ್ದೇವೆ. ಪರೀಕ್ಷೆ ಬರೆಯುವವರಿಗೆ ಡ್ರೆಸ್‍ಕೋಡ್‍ನ್ನು ನೀಡಿದ್ದೇವೆ. ಹೀಗಾಗಿ ನಕಲಿ ಅಭ್ಯರ್ಥಿಗಳು ನುಸುಳುವುದಕ್ಕೂ ಅವಕಾಶ ಇರುವುದಿಲ್ಲ. ಬಿಗಿ ಬಂದೋಬಸ್ತ್‌ನಲ್ಲಿ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆಯೊಂದಿಗೆ ನೆರವು ಕೋರಲಾಗಿದೆ ಎಂದರು.
ಪರೀಕ್ಷೆಯು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿದೆ. 50 ಅಂಕಗಳಿಗೆ ಡಿಸ್ಕ್ರಿಪ್ಟೀವ್ ಪಶ್ನೆಪತ್ರಿಕೆ ಹಾಗೂ 150 ಅಂಕಗಳಿಗೆ ಆಬ್ಜೆಕ್ಟೀವ್ ಪ್ರಶ್ನೆಪತ್ರಿಕೆ ಇರುತ್ತದೆ. ಪರೀಕ್ಷೆಯಲ್ಲಿ ಒಮ್ಮೆ ಅಭ್ಯರ್ಥಿಗಳು ಒಳಗಡೆ ಬಂದ ಬಳಿಕ ಪುನಃ ಯಾವುದೇ ಕಾರಣಕ್ಕೂ ಹೊರಬಿಡುವುದಿಲ್ಲ. ಪರೀಕ್ಷೆ ಮುಗಿಯುವವರಿಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಇರಬೇಕಾಗುತ್ತದೆ ಎಂದು ಈಗಾಗಲೇ ಸಂಬಂಧಪಟ್ಟ ನಿರ್ವಾಹಕರಿಗೆ ಸೂಚಿಸಲಾಗಿದೆ. ಒಂದು ಪ್ರಶ್ನೆಪತ್ರಿಕೆ ನಂತರ 30 ನಿಮಿಷ ಅಂತರ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸೆ.22ರಂದು ಪರೀಕ್ಷೆಗೆ ಕೆಇಎ ಸಕಲ ಸಿದ್ಧತೆ ನಡೆಸಿದ್ದು, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆ ಸಿಗುವ ನಿಟ್ಟಿನಲ್ಲಿ ನಾವು ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವುದೇ ಗಾಳಿ ಸುದ್ದಿಗೆ ತಲೆಗೂಡಬೇಡಿ ಎಂದು ಎಚ್. ಪ್ರಸನ್ನ ಮಾಹಿತಿ ನೀಡಿದರು.
ಈಗಾಗಲೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಈ ಪರೀಕ್ಷೆ ಮುಂದೂಡಲಾಗಿದೆ. ಪುನಃ ಹಾಗೆಯೇ ಮಾಡಿದರೆ ಪರೀಕ್ಷೆ ನಡೆಸುವುದು ಯಾವಾಗ? ಇಷ್ಟಕ್ಕು ಯಾವುದಾದರು ಒಂದು ಪರೀಕ್ಷೆ ಇದ್ದೇ ಇರುತ್ತದೆ. ಹಾಗಂತ ಪರೀಕ್ಷೆ ಇಲ್ಲದ ದಿನ ಹುಡುಕುವುದು ಕೂಡ ಕಷ್ಟ. ನಾವು ಈ ದಿನಾಂಕವನ್ನು ಮೂರು ತಿಂಗಳ ಮೊದಲೇ ತೀರ್ಮಾನಿಸಿದ್ದು ಆ ಪ್ರಕಾರ ನಡೆಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಸಂಶಯ ಬೇಡ: ‘ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ವಿಷಯದಲ್ಲಿ ಯಾವ ಅನುಮಾನವನ್ನೂ ಇಟ್ಟುಕೊಳ್ಳುವುದು ಬೇಡ. ಗಾಳಿ ಸುದ್ದಿಗಳಿಗೆ ಮಹತ್ವ ಕೊಡಬೇಡಿ. ಯಾರು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುತ್ತಾರೊ ಅಂತಹವರಿಗೆ ಅನ್ಯಾಯವಾಗದ ಹಾಗೆ ನಾವು ಪರೀಕ್ಷೆ ನಡೆಸುತ್ತೇವೆ. ಇದು ನಮ್ಮ ಬದ್ಧತೆ. ಅಕ್ರಮಗಳಿಗೆ ಅವಕಾಶವೇ ಇಲ್ಲದಂತೆ ನಿಗಾ ಇಡಲಾಗುವುದು’ ಅವರು ಎಂದು ಸ್ಪಷ್ಟಪಡಿಸಿದರು.