ಜಾತಿ ನಿಂದನೆ ಆರೋಪ; ಪುನೀತ್ ಕೆರೆಹಳ್ಳಿ ಪೊಲೀಸ್‌ ವಶಕ್ಕೆ

Update: 2023-11-04 09:31 GMT

ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಇದ್ರೀಸ್‌ ಪಾಷಾ ಕೊಲೆ ಪ್ರಕರಣದ ಆರೋಪಿ ಹಾಗೂ ಸಂಘಪರಿವಾರದ ಮುಖಂಡ ಪುನೀತ್ ಕೆರೆಹಳ್ಳಿಯನ್ನು ನಗರದ ಸಂಪಿಗೆಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  

ಕನ್ನಡ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಅವರು ನೀಡಿರುವ ದೂರಿನ ಅನ್ವಯ ಇತ್ತೀಚೆಗೆ ಸಂಪಿಗೆಹಳ್ಳಿ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿತ್ತು. 

"ದಲಿತನಾಗಿರುವ ಕಾರಣ ತನ್ನನ್ನು ಪುನೀತ್ ಕೆರೆಹಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ. ನಾನೊಬ್ಬ ಕನ್ನಡಪರ ಹೋರಾಟಗಾರನಾಗಿದ್ದು, ಇತ್ತೀಚೆಗೆ ಇದ್ರೀಸ್ ಪಾಷಾ ಕೊಲೆ ಆರೋಪದಲ್ಲಿ ಜೈಲು ಶಿಕ್ಷೆಯಿಂದ ಬಿಡುಗಡೆಗೊಂಡ ಬಳಿಕವೂ ಸಮಾಜದ ಸ್ವಾಸ್ಥ್ಯ ಕದಡಲು ಯತ್ನಿಸುತ್ತಿದ್ದ ಪುನೀತ್ ಕೆರೆಹಳ್ಳಿಯ ಬಗ್ಗೆ ಜಾಗೃತರಾಗಿರುವಂತೆ ಸಾಮಾಜಿಕ ಕಳಕಳಿಯಿಂದ ಮಾಧ್ಯಮ ವರದಿಯನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದಿನಾಂಕ 17-10-2023 ರಂದು ಪುನೀತ್ ಕೆರೆಹಳ್ಳಿ, ನನ್ನ ಮತ್ತು ನನ್ನ ಪತ್ನಿ, ಮಕ್ಕಳ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದ್ದಾನೆ. ನನ್ನ ಪತ್ನಿ ,ಮಕ್ಕಳು ತಲೆ ಎತ್ತಿ ನಡೆಯಂದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆʼʼ ಎಂದು ಭೈರಪ್ಪ ಹರೀಶ್ ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದರು.

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ತನ್ನನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ವಿಚಾರಣೆ ನಡೆಸಿದ್ದ ಸಮಿತಿ, 'ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ' ಎಂದು ಅಭಿಪ್ರಾಯಪಟ್ಟು ವರದಿ ನೀಡಿತ್ತು. ವರದಿಯನ್ವಯ ಆದೇಶ ಹೊರಡಿಸಿದ ಸರಕಾರ, ಪುನೀತ್ ನನ್ನು ಬಂಧನಮುಕ್ತಗೊಳಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿತ್ತು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News