ಡೆಂಗ್ಯೂ ʼತುರ್ತು ಪರಿಸ್ಥಿತಿʼಯನ್ನು ಘೋಷಿಸಿ, ಪರೀಕ್ಷಾ ವೆಚ್ಚವನ್ನು ಸರಕಾರವೇ ಭರಿಸಬೇಕು : ಆರ್‌.ಅಶೋಕ್

Update: 2024-07-07 11:00 GMT

Photo : x/@RAshokaBJP

ಬೆಂಗಳೂರು : ರಾಜ್ಯದಲ್ಲಿ ಕೂಡಲೇ ‌ಡೆಂಗ್ಯೂ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಆರ್‌.ಅಶೋಕ್ ಅವರು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ‌ಡೆಂಗ್ಯೂ ರೋಗಿಗಳನ್ನು ಭೇಟಿ ಮಾಡಿ, ಸೌಲಭ್ಯ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‌ಡೆಂಗ್ಯೂ ರೋಗ ಹೀಗೆ ಹರಡುವಾಗ ಸರಕಾರ ಪ್ರತಿ ತಾಲೂಕಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರಕಾರ ಮಾಡಿಲ್ಲ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ‌ಡೆಂಗ್ಯೂಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು. ತೈಲ ದರ ಏರಿಕೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸರಕಾರ ಹಾಕಿರುವಾಗ ಜನರಿಗೆ ಉಚಿತ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲವೇ?. ಉಚಿತ ಪರೀಕ್ಷೆ ಮಾಡಿದರೆ ಸುಮಾರು 10 ಕೋಟಿ ರೂ.ಖರ್ಚಾಗಬಹುದು. ಅಷ್ಟು ಹಣವನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲವೇ?. ಅದಕ್ಕೂ ತೆರಿಗೆ ಹಾಕಬೇಕೆ? ಕೆಲ ಆರೋಗ್ಯ ಕೇಂದ್ರಗಳು 1,000 ರೂ.ವರೆಗೂ ಪರೀಕ್ಷಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಸರಕಾರ ಕೂಡಲೇ ವೆಚ್ಚವನ್ನು ಭರಿಸಬೇಕು" ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ‌ಡೆಂಗ್ಯೂ ರೋಗ ವೇಗವಾಗಿ ಹರಡುತ್ತಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಜನರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲಿ ಜನರು ಭಯಕ್ಕೊಳಗಾದರೂ ಸರಕಾರಕ್ಕೆ ಇದರ ಭಯ ಬಂದಿಲ್ಲ. 100 ಮಾದರಿ ಪರೀಕ್ಷೆ ಮಾಡಿದರೆ 13-14 ರಲ್ಲಿ ‌ಡೆಂಗ್ಯೂ ಲಕ್ಷಣ ಕಂಡು ಬರುತ್ತಿದೆ. ಬೇರೆ ರೋಗಗಳಿರುವ ವ್ಯಕ್ತಿಗಳಿಗೆ ‌ಡೆಂಗ್ಯೂ ಬಂದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲೆಡೆ ಕಸದ ರಾಶಿ ಇದೆ, ಮಳೆಯಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ಆದರೂ ಸರಕಾರ ಏನೂ ಕ್ರಮ ವಹಿಸಿಲ್ಲ ಎಂದು ದೂರಿದರು.

ಆತಂಕ ನಿವಾರಿಸಿ :

ಜನರಲ್ಲಿ ‌ಡೆಂಗ್ಯೂ ಬಗ್ಗೆ ಉಂಟಾಗಿರುವ ಆತಂಕವನ್ನು ನಿವಾರಿಸಲು ಸರಕಾರ ಜಾಗೃತಿ ಮೂಡಿಸಬೇಕು. ಉದ್ಯಾನ, ಸಾರ್ವಜನಿಕ ಸ್ಥಳ, ನೀರು ನಿಲ್ಲುವ ಸ್ಥಳ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸಬೇಕು. ಆರೋಗ್ಯ ಸಚಿವರು ಎಲ್ಲ ಜಿಲ್ಲೆಗಳಿಗೆ ಹೋಗಿ ಜನರನ್ನು ಭೇಟಿ ಮಾಡಬೇಕು. ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಬೇಕು ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News