ಕಾವೇರಿ 5ನೇ ಹಂತದ ಯೋಜನೆ ಮಾಡಿದ್ದು ಬಿಜೆಪಿ, ಹೆಸರು ತೆಗೆದುಕೊಳ್ಳುತ್ತಿರುವುದು ಕಾಂಗ್ರೆಸ್ : ಆರ್.ಅಶೋಕ್
ಬೆಂಗಳೂರು : "ಪೂಜೆ ಮುಗಿದ ನಂತರ ಕೊನೆಯಲ್ಲಿ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ 5ನೇ ಹಂತದ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್ ಮುಂದೆ ಬಂದು ಹೆಸರು ಪಡೆದುಕೊಳ್ಳುತ್ತಿದೆ. ಈ ಯೋಜನೆ ಮಾಡಿದ್ದು ಬಿಜೆಪಿ ಎಂದು ಗೊತ್ತಿದ್ದರೂ, ನಾವೇ ಮಾಡಿದ್ದೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʼ2018 ರ ಜನವರಿ 24ರಂದು ಈ ಯೋಜನೆಗೆ 5,500 ಕೋಟಿ ರೂ. ಸಾಲ ಪಡೆಯಲು ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಕಾಮಗಾರಿಗೆ 90 ತಿಂಗಳ ಗಡುವು ವಿಧಿಸಲಾಗಿತ್ತು. ಜೊತೆಗೆ ಕಾಮಗಾರಿ ನಡೆಸುವ ಸಂಸ್ಥೆಗಳನ್ನೂ ನಿಗದಿಪಡಿಸಲಾಗಿತ್ತು. 2019 ರ ಜನವರಿ 1 ರಂದು ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಆಗಲೂ ಬಿಜೆಪಿ ಸರ್ಕಾರವೇ ಇತ್ತು. ಪ್ಯಾಕೇಜ್ 2ನಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್ 3 ರಲ್ಲಿ ಟಿ.ಕೆ.ಹಳ್ಳಿ ಪಂಪಿಂಗ್ ಘಟಕ, ಪ್ಯಾಕೇಜ್ 4ರಲ್ಲಿ ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ಎರಡು ಪಂಪಿಂಗ್ ಸ್ಟೇಷನ್, ಪ್ಯಾಕೇಜ್ 7ರಲ್ಲಿ ಟಿ.ಕೆ.ಹಳ್ಳಿ-ಹಾರೋಹಳ್ಳಿ ಪೈಪ್‌ಲೈನ್, ಪ್ಯಾಕೇಜ್ 8ರಲ್ಲಿ ಹಾರೋಹಳ್ಳಿ-ವಾಜರಹಳ್ಳಿ ಪೈಪ್‌ಲೈನ್, ಪ್ಯಾಕೇಜ್ 10ರಲ್ಲಿ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್, ಪ್ಯಾಕೇಜ್ 12ರಲ್ಲಿ ಪೂರ್ವ ಭಾಗದಲ್ಲಿ ನೆಲಮಟ್ಟದ ಜಲಾಗಾರ, ಪ್ಯಾಕೇಜ್ 13ರಲ್ಲಿ ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತುʼ ಎಂದು ವಿವರಿಸಿದರು.
ನಂತರ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಕಾಮಗಾರಿ ಶೇ.80 ರಷ್ಟು ಪೂರ್ಣಗೊಂಡಿತ್ತು. ಡಿಪಿಆರ್, ಹಣ ಹೊಂದಿಕೆ, ಕಾಮಗಾರಿ ಆರಂಭ, ಹೀಗೆ ಎಲ್ಲವನ್ನೂ ಮುಚ್ಚಿಟ್ಟು ಹೆಸರು ತೆಗೆದುಕೊಳ್ಳುತ್ತಿದ್ದಾರೆ. ದೇವರನ್ನು ಕೂರಿಸಿ ಹೋಮವನ್ನು ನಾವು ಮಾಡಿದರೆ, ಮಂಗಳಾರತಿ ಸಮಯದಲ್ಲಿ ಕಾಂಗ್ರೆಸ್ ನಾಯಕರು ಬಂದು ಇದು ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಸಿದ್ದೆ. ಈಗ ಏಕಾಏಕಿ ನಾವೇ ಕಷ್ಟಪಟ್ಟಿದ್ದು ಎನ್ನುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದರು.
ಒಂದು ರೂಪಾಯಿಯನ್ನೂ ನೀಡಿಲ್ಲ :
ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ರಸ್ತೆ ಅಭಿವೃದ್ಧಿಗೆ 8,000 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಸುಮಾರು ಶೇ.50ರಷ್ಟು ಕೆಲಸ ಆರಂಭವಾಗಿತ್ತು. ರಾಜಕಾಲುವೆ ಸುಧಾರಣೆಗೆ 1,600 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಡಿ.ಕೆ.ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆಂದು ಹೇಳಿ, ಇದೇ ಹಿಂದಿನ ಅನುದಾನಗಳನ್ನು ವಾಪಸ್ ಪಡೆದುಕೊಂಡರು. ಬಳಿಕ ಹೊಸದಾಗಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಬಿ.ಎಸ್.ಯಡಿಯೂರಪ್ಪನವರು ವಿಶೇಷ ಅನುದಾನವನ್ನು ಬೆಂಗಳೂರಿಗೆ ನೀಡಿದ್ದರು. ಬಳಿಕ ಪ್ರತಿ ವರ್ಷ 3-4 ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವಿಶೇಷ ಅನುದಾನವಾಗಿ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದರು.
ಅನುದಾನದ ಬಗ್ಗೆ ಮಾತನಾಡಲು ಮುಂದಾದರೆ ಸಿಎಂ ಸಿದ್ದರಾಮಯ್ಯ ಉಡಾಫೆ ಮಾತಾಡುತ್ತಾರೆ. ಬೆಂಗಳೂರಿಗೆ ಈಗಿನ ರಾಜ್ಯ ಸರ್ಕಾರ ಎಷ್ಟು ಅನುದಾನ ಕೊಟ್ಟಿದೆ, ಹಿಂದಿನ ಬಿಜೆಪಿ ಸರ್ಕಾರ ಎಷ್ಟು ನೀಡಿದೆ. ಕೇಂದ್ರ ಸರ್ಕಾರ ಎಷ್ಟು ಹಣ ನೀಡಿದೆ ಎಂದು ಹೋಲಿಕೆ ಮಾಡಿ ತೋರಿಸಲಿ. ಕೇಂದ್ರ ಸರ್ಕಾರದಿಂದ ತಾರತಮ್ಯ ಎಂದು ಹೇಳುತ್ತಾರೆ. ಹೀಗೆ ಹೇಳುವುದಾದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಮೊದಲಾದ ನಗರಗಳಿಗೆ ತೆರಿಗೆಗೆ ಅನುಗುಣವಾಗಿ ಎಷ್ಟು ಅನುದಾನ ನೀಡಲಾಗಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.
ಮಳೆಯಿಂದ ಹಾನಿಯಾಗಿದೆ :
ಬೆಂಗಳೂರಿನ ಬೆಳ್ಳಂದೂರು, ಮಹದೇವಪುರ ಮೊದಲಾದ ಕಡೆ ಮಳೆಯಿಂದ ಹಾನಿಯಾಗಿದೆ. ಇಂತಹ ಸಮಯದಲ್ಲೂ ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದ್ದಾರೆ. ಆದರೆ ಕೇವಲ ಸದ್ದು ಕೇಳಿಬರುತ್ತಿದ್ದು, ಬ್ರ್ಯಾಂಡ್ ಬದಲು ಬ್ಯಾಂಡ್ ಬೆಂಗಳೂರು ಆಗಿದೆ. ನಿಯಂತ್ರಣ ಕೊಠಡಿ ತೆರೆದಿದ್ದಾರೆಯೇ ಹೊರತು ಯಾವ ಕೆಲಸವೂ ಆಗಿಲ್ಲ. ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಒಂದೋ ಬ್ರ್ಯಾಂಡ್ ಬೆಂಗಳೂರು ಘೋಷಣೆಯನ್ನು ವಾಪಸ್ ಪಡೆಯಲಿ, ಇಲ್ಲವಾದರೆ ಏನು ಮಾಡುತ್ತೇವೆಂದು ಸರಿಯಾದ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.